ಲಂಡನ್: ಜಾಸನ್ ಬೆಹ್ರನ್ಡ್ರಾಫ್(43ಕ್ಕೆ5) ಹಾಗೂ ಮಿಚೆಲ್ ಸ್ಟಾರ್ಕ್(44ಕ್ಕೆ4) ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 221 ರನ್ಗಳಿಗೆ ಆಲೌಟ್ ಆಗುವ ಮೂಲಕ 64 ರನ್ಗಳಿಂದ ಸೋಲು ಕಾಣುವ ಮೂಲಕ ಸೆಮಿಫೈನಲ್ ಹಾದಿಯನ್ನು ದುರ್ಗಮಗೊಳಿಸಿಕೊಂಡಿದೆ.
ಆಸೀಸ್ ನೀಡಿದ್ದ 286 ರನ್ಗಳ ಗುರಿಯನ್ನು ಬೆನ್ನೆತ್ತಿದ ಇಂಗ್ಲೆಂಡ್ 44.4 ಓವರ್ಗಳಲ್ಲಿ 221 ರನ್ಗಳಿಗೆ ಸರ್ವಫತನಗೊಳ್ಳುವ ಮೂಲಕ 64 ರನ್ಗಳಿ ಹೀನಾಯ ಸೋಲು ಕಂಡಿದೆ.
286 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನೆತ್ತಿದ ಇಂಗ್ಲೆಂಡ್ ಮೊದಲ ಓವರ್ನಲ್ಲೆ ಜೇಮ್ಸ್ ವಿನ್ಸ್ ವಿಕೆಟ್ ಕಳೆದುಕೊಂಡಿತು. ಕೇವಲ 2 ಎಸೆತಗಳನ್ನೆದುರಿಸಿದ್ದ ಜೇಮ್ಸ್ ವಿನ್ಸ್ರನ್ನು ಬೆಹ್ರನ್ಡ್ರಾಫ್ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಬಂದ ರೂಟ್(8) ಸ್ಟಾರ್ಕ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ನಾಯಕ ಮಾರ್ಗನ್(4) ಕೂಡ ಸ್ಟಾರ್ಕ್ ಬೌಲಿಂಗ್ನಲ್ಲಿ ಕಮ್ಮಿನ್ಸ್ಗೆ ಕ್ಯಾಚ್ ನೀಡಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಬೈರ್ಸ್ಟೋವ್ ಆಟ 27 ರನ್ಗಳಿಗೆ ಸೀಮಿತವಾಯಿತು. ಆಸರೆ ಆಲ್ರೌಂಡರ್ ಬೆನ್ ಸ್ಟೋಕ್ಸ್ 5ನೇ ವಿಕೆಟ್ ಜೊತೆಯಾಟದಲ್ಲಿ ಬಟ್ಲರ್(25) ಜೊತೆಗೂಡಿ 71 ರನ್ಗಳ ಜೊತೆಯಾಟ ನೀಡಿ ತಂಡವನ್ನು ಕುಸಿತದಿಂದ ಪಾರು ಮಾಡಿ, ಗೆಲುವಿನತ್ತ ಕೊಡೊಯ್ಯುವ ಪ್ರಯತ್ನ ಮಾಡಿದರು. ಆದರೆ ಈ ವೇಳೆ ದಾಳಿಗಿಳಿದ ಸ್ಟೋಯ್ನಿಸ್ 25 ರನ್ಗಳಿಸಿದ್ದ ಸ್ಫೋಟಕ ಆಟಗಾರ ಬಟ್ಲರ್ ವಿಕೆಟ್ ಪಡೆದು ಆಸೀಸ್ ಗೆಲುವಿನ ಹಾದಿ ಸುಗಮಗೊಳಿಸಿದರು.
ಬಟ್ಲರ್ ನಿರ್ಗಮನದ ನಂತರ 7 ನೇ ಬ್ಯಾಟ್ಸ್ಮನ್ ಆಗಿ ಬಡ್ತಿ ಪಡೆದು ಬಂದ ವೋಕ್ಸ್ (25) ಸ್ಟೋಕ್ಸ್ ಜೊತಗೂಡಿ 53 ರನ್ಗಳ ಕಿರುಕಾಣಿಕೆ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಟಾರ್ಕ್ 115 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 89 ರನ್ಗಳಿಸಿದ್ದ ಸ್ಟೋಕ್ಸ್ ವಿಕೆಟ್ ಪಡೆದರು. ಸ್ಟೋಕ್ಸ್ ಔಟಾದ ಬೆನ್ನಲ್ಲೇ ಎರಡನೇ ಸ್ಪೆಲ್ನಲ್ಲಿ ದಾಳಿಗಿಳಿದ ಬೆಹ್ರನ್ಡ್ರಾಫ್, ಕ್ರಿಸ್ ವೋಕ್ಸ್(25), ಮೊಯಿನ್ ಅಲಿ(6), ಹಾಗೂ ಜೋಫ್ರಾ ಆರ್ಚರ್(1) ವಿಕೆಟ್ ಪಡೆದರು. 25 ರನ್ಗಳಿಸಿದ್ದ ಆದಿಲ್ ರಶೀದ್ರ ವಿಕೆಟ್ ಪಡೆಯುವ ಮೂಲಕ ಸ್ಟಾರ್ಕ್ ಇಂಗ್ಲೆಂಡ್ ಇನ್ನಿಂಗ್ಸ್ಗೆ ತೆರೆ ಎಳೆದರು.
ಮಾರಕ ಬೌಲಿಂಗ್ ದಾಳಿ ನಡೆಸಿದ ಜಾಸನ್ ಬೆಹ್ರನ್ಡ್ರಾಫ್ 44ಕ್ಕೆ5 ಹಾಗೂ ಮಿಚೆಲ್ ಸ್ಟಾರ್ಕ್ 43ಕ್ಕೆ4 ವಿಕೆಟ್ ಪಡೆದು ಇಂಗ್ಲೆಂಡ್ ಸೆಮಿಫೈನಲ್ ಕನಸನ್ನು ಕಠಿಣಗೊಳಿಸಿದರು. ಈ ಗೆಲುವಿನ ಮೂಲಕ 12 ಅಂಕ ಪಡೆದ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿತು.
ಇನ್ನು 7 ಪಂದ್ಯಗಲ್ಲಿ 3 ಗೆಲುವು 4 ಸೋಲು ಕಂಡಿರುವ ಇಂಗ್ಲೆಂಡ್ 8 ಅಂಕಗಳೊಂದಿಗೆ 4 ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ಕನಸನ್ನು ನನಸು ಮಾಡಿಕೊಳ್ಳಬೇಕಾದರೆ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಜೂನ್ 30 ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ತಂಡ ಭಾರತ ತಂಡವನ್ನು ಎದುರಿಸಲಿದೆ. ಆಸ್ಟ್ರೇಲಿಯ ಜೂನ್ 29 ರಂದು ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ.