ದುಬೈ: ಕೋವಿಡ್‌ನಿಂದ ಕಳೆದ ಕೆಲವು ತಿಂಗಳಿನಿಂದ ಕ್ರಿಕೆಟ್ ಆಡದ ಕಾರಣ ಭಾರತ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಐಸಿಸಿ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಒಂದು ಸ್ಥಾನ ಕುಸಿದು ನಾಲ್ಕನೇ ಸ್ಥಾನದಲ್ಲಿದ್ದರೆ, ನಾಯಕಿ ಮಿಥಾಲಿ ರಾಜ್ 10ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಏಕದಿನ ಸರಣಿ ಮುಗಿದ ನಂತರ ಐಸಿಸಿ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ.
ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅಗ್ರಸ್ಥಾನ ಪಡೆದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 3-0 ಪಾಯಿಂಟುಗಳಲ್ಲಿ ವೈಟ್‌ವಾಶ್ ಮಾಡುವನಲ್ಲಿ ಪ್ರಮುಖ ಪಾತ್ರ ವಹಿಸಿದ ಲ್ಯಾನಿಂಗ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಪುನಃ ಪಡೆದುಕೊಂಡಿದ್ದಾರೆ.
28 ವರ್ಷದ ಆಟಗಾರ್ತಿ ಸರಣಿಯಲ್ಲಿ 163 ರನ್ ಸಿಡಿಸುವ ಮೂಲಕ 4 ಸ್ಥಾನಕ್ಕೆ ಬಡ್ತಿ ಪಡೆದು ವಿಂಡೀಸ್ ನಾಯಕಿಯನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. 2018ರ ಬಳಿಕ ಇದೇ ಮೊದಲ ಬಾರಿಗೆ ಮೊದಲ ಸ್ಥಾನ ಪಡೆದಿದ್ದಾರೆ. 2014ರಿಂದ 2018ರ ವರೆಗೆ 902 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದರು.
ಬೌಲರ್ಸ್ ಶ್ರೇಯಾಂಕದಲ್ಲಿ ಜೂಲಾನ್ ಗೋಸ್ವಾಮಿ 5 ನೇ ಸ್ಥಾನ ಪಡೆಯುವ ಮೂಲಕ ಭಾರತದ ಗರಿಷ್ಠ ಶ್ರೇಯಾಂಕ ಪಡೆದವರಾಗಿದ್ದಾರೆ. ಇವರ ನಂತರದಲ್ಲಿ ಪೂನಮ್ ಯಾದವ್(6), ಶಿಖಾ ಪಾಂಡೆ(7), ದೀಪ್ತಿ ಶರ್ಮಾ 10 ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಸ್ಪಿನ್ನರ್ ಜೆಸ್ ಜೊನಾಸೆನ್ ಅಗ್ರಸ್ಥಾನದಲ್ಲಿ ಇದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ದೀಪ್ತಿ ಶರ್ಮಾ ಮತ್ತು ಶಿಖಾ ಕ್ರಮವಾಗಿ 4 ಮತ್ತು 9ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ತಂಡದ ವಿಭಾಗದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ. ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.