ಪೊಚೆಫ್ಸ್ಟ್ರೂಮ್ (ದಕ್ಷಿಣ ಆಫ್ರಿಕಾ):ಇಲ್ಲಿನ ಸೆಡ್ಗರ್ಸ್ ಪಾರ್ಕ್ನಲ್ಲಿ ನಡೆದ ಅಂಡರ್-19 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು 6 ವಿಕೆಟ್ಗಳ ಅಂತರದಿಂದ ಸೋಲಿಸಿದ ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿತ್ತು. ಕಿವಿಸ್ ಪರ ಬೆಕ್ಹ್ಯಾಮ್ ವೀಲರ್-ಗ್ರೀನಲ್ ಅಜೆಯ 75, ನಿಕೋಲಸ್ ಲಿಡ್ಸ್ಟೋನ್ 44, ಫರ್ಗುಸ್ ಲೆಲ್ಮನ್ 24 ರನ್ಗಳಿಸಿದ್ರು. ಬಾಂಗ್ಲಾ ಪರ ಉತ್ತಮ, ಬೌಲಿಂಗ್ ಪ್ರದರ್ಶಿಸಿದ ಶೋರಿಫುಲ್ ಇಸ್ಲಾಂ 3 ವಿಕೆಟ್, ಶಮಿಮ್ ಹೊಸೈನ್ 2, ಹಸನ್ ಮುರದ್ 2 ವಿಕೆಟ್ ಪಡೆದು ಮಿಂಚಿದ್ರು.
212 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾ ತಂಡಕ್ಕೆ ಕಿವೀಸ್ ಬೌಲರ್ಗಳು ಶಾಕ್ ನೀಡಿದ್ರು. ಆರಂಭಿಕ ಆಟಗಾರರು ತಂಡದ ಮೊತ್ತ 32 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಜೊತೆಯಾದ ಮಹಮುದುಲ್ ಹಸನ್ ಜಾಯ್ ಮತ್ತು ಟೌಹಿಡ್ ಹ್ರೀಡಾಯ್(40) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ರು.
ಮಹಮುದುಲ್ ಹಸನ್ ಜಾಯ್ ಆಕರ್ಶಕ ಶತಕ ಸಿಡಿಸಿ ಮಿಂಚಿದ್ರೆ, ಶಹದತ್ ಹೊಸೈನ್ 40 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ರು. ಅಂತಿಮವಾಗಿ ಬಾಂಗ್ಲಾ ತಂಡ 44.1 ಓವರ್ಗಳಲ್ಲಿ 215 ರನ್ಗಳಿಸುವ ಮೂಲಕ ಗೆದ್ದು ಮೊದಲ ಬಾರಿಗೆ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದೆ. ನ್ಯೂಜಿಲ್ಯಾಂಡ್ ತಂಡದ ಪರ ಕ್ರಿಸ್ಟಿಯನ್ ಕ್ಲಾರ್ಕ್, ಡೇವಿಡ್ ಹ್ಯಾನ್ಕಾಕ್, ಆದಿತ್ಯ ಅಶೋಕ್ ಮತ್ತು ಜೆಸ್ಸಿ ತಾಶ್ಕಾಫ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.
ಈಗಾಗಲೇ ಭಾರತ ಅಂಡರ್ -19 ತಂಡ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದು, ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿಶ್ವಕಪ್ ಕಿರೀಟಕ್ಕಾಗಿ ಕಾದಾಟ ನಡೆಸಲಿವೆ.