ಬ್ಲೂಮ್‌ಫಾಂಟೈನ್: ಹಾಲಿ ಅಂಡರ್ 19 ವಿಶ್ವ ಚಾಂಪಿಯನ್ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 90 ರನ್ಗಳಿಂದ ಮಣಿಸಿ ಶುಭಾರಂಭ ಮಾಡಿದ್ದು, ಇಂದು ಎರಡನೇ ಪಂದ್ಯದಲ್ಲಿ ಇದೇ ವರ್ಷ ವಿಶ್ವಕಪ್ಗೆ ಅರ್ಹತೆ ಪಡೆದಿರುವ ಜಪಾನ್ ವಿರುದ್ಧ ಆಡುತ್ತಿದ್ದು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ.
4 ಬಾರಿ ಅಂಡರ್ 19 ವಿಶ್ವಕಪ್ ಎತ್ತಿಹಿಡಿದಿರುವ ಭಾರತ ತಂಡ ಈ ಬಾರಿಯೂ ಕಪ್ ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದ್ದು, ಇಂದಿನ ಜಪಾನ್ ವಿರುದ್ಧದ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸುವ ನಿರೀಕ್ಷೆಯಲ್ಲಿ ಪ್ರಿಯಂ ಗರ್ಗ್ ಪಡೆಯಿದೆ.
ನಾಯಕ ಪ್ರಿಯಂ ಗರ್ಗ್ ಸೇರಿದಂತೆ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ ಆಲ್ರೌಂಡರ್ ತಿಲಕ್ ವರ್ಮಾ ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಸಿದ್ದೇಶ್ ವೀರ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ತಂಡಕ್ಕೆ ಬಲ ತಂದಿದೆ. ಇನ್ನು ಆಕಾಶ್ ಸಿಂಗ್, ರವಿ ಬಿಶೋನಿ, ಕಾರ್ತಿಕ್ ತ್ಯಾಗಿ ಅವರ ಬೌಲಿಂಗ್ ಎದುರಿಸುವುದು ಜಪಾನ್ಗೆ ಸವಾಲಿನ ಕೆಲಸವಾಗಲಿದೆ.
ಇನ್ನು ಜಪಾನ್ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದಾಗಿದ್ದರಿಂದ ಒಂದು ಅಂಕ ಪಡೆದಿದೆ. ಆ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 28 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 195ರ ರನ್ ಗಳಿಸಿತ್ತು.
ಜಪಾನ್ ತಂಡಕ್ಕೆ ಈ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರರಿಂದ ಕ್ರಿಕೆಟ್ ಆಟದ ಬಗ್ಗೆ ತಿಳಿದುಕೊಳ್ಳಲು ಉತ್ತಮ ಅವಕಾಶವಿದೆ. ಇದ್ದದ್ದರಲ್ಲಿ ಬೌಲರ್ಗಳಾದ ಯುಗಂಧರ್ ರೆಥಾರೆಕರ್ ಹಾಗೂ ನೀಲ್ ಡೇಟ್ ಪಂದ್ಯದ ಆಕರ್ಷಣೆಯಾಗಿದ್ದಾರೆ.