ದುಬೈ:ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ನಲ್ಲಿ ಆಕರ್ಷಕ ದ್ವಿಶತಕ ಸಿಡಿಸಿದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನವನ್ನು ಕೊಹ್ಲಿ ಜೊತೆ ಹಂಚಿಕೊಂಡಿದ್ದಾರೆ.
ಈ ಸರಣಿಗೂ ಮುನ್ನ 4ನೇ ಸ್ಥಾನದಲ್ಲಿದ್ದ ಅವರು ದ್ವಿಶತಕ ಸಿಡಿಸಿದ ನಂತರ 79 ರೇಟಿಂಗ್ ಅಂಕಗಳನ್ನು ಪಡೆದಿದ್ದಾರೆ. ಈ ಮೊದಲು ಅವರು 812 ಅಂಕ ಹೊಂದಿದ್ದರು. ಇದೀಗ ಅವರ ರೇಟಿಂಗ್ 886ಕ್ಕೇರಿದ್ದು, ಇಷ್ಟೇ ಅಂಕ ಹೊಂದಿರುವ ಕೊಹ್ಲಿ ಜೊತೆ 2ನೇ ಸ್ಥಾನ ಹಂಚಿಕೊಂಡಿದ್ದಾರೆ. 911 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
86 ರನ್ ಸಿಡಿಸಿದ್ದ ಟಾಮ್ ಲಾಥಮ್ 733 ಅಂಕಗಳೊಂದಿದೆ 10ನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿ ಜೀವನದ ಗರಿಷ್ಠ ರೇಟಿಂಗ್ ಪಾಯಿಂಟ್ ಆಗಿದೆ. ಶತಕ ಸಿಡಿಸಿದ ವೆಸ್ಟ್ ಇಂಡೀಸ್ ತಂಡದ ಜರ್ಮೈನ್ ಬ್ಲಾಕ್ವುಡ್ 17 ಸ್ಥಾನ ಏರಿಕೆ ಕಂಡಿದ್ದು, 41ನೇ ಸ್ಥಾನ ಪಡೆದಿದ್ದಾರೆ.