ದುಬೈ: ಭಾರತದ ವಿರುದ್ಧ ಆಕರ್ಷಕ ದ್ವಿಶತಕ ಸಿಡಿಸಿದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬುಧವಾರ ಬಿಡುಗಡೆಯಾಗಿರುವ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 3ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದು, ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ ಬುಮ್ರಾ ಮತ್ತು ಅಶ್ವಿನ್ ಬೌಲಿಂಗ್ ಶ್ರೇಯಾಂಕದಲ್ಲಿ ತಲಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ.
ಕೊಹ್ಲಿ ಚೆನ್ನೈ ಟೆಸ್ಟ್ನಲ್ಲಿ 11 ಮತ್ತು 72 ರನ್ ಗಳಿಸಿದ್ದರು. ಆದರೆ ಎರಡು ಇನ್ನಿಂಗ್ಸ್ ಸೇರಿ 258 ರನ್ ಗಳಿಸಿದ ಇಂಗ್ಲೆಂಡ್ ಕ್ಯಾಪ್ಟನ್ ರೂಟ್ 2 ಸ್ಥಾನ ಏರಿಕೆ ಕಂಡಿದ್ದರಿಂದ ಕೊಹ್ಲಿ 4ರಿಂದ 5ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಇಂಗ್ಲೆಂಡ್ಗೆ 227 ರನ್ಗಳ ಜಯ ಗಳಿಸಲು ನೆರವಾದ ರೂಟ್ 883 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ.
ಅನುಭವಿ ಬೌಲರ್ ರವಿಚಂದ್ರನ್ ಆಶ್ವಿನ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ ಒಂದು ಸ್ಥಾನ ಏರಿಕೆ ಕಂಡಿದ್ದು, ಕ್ರಮವಾಗಿ 7 ಮತ್ತು 8ನೇ ಸ್ಥಾನಕ್ಕೇರಿದ್ದಾರೆ.