ದುಬೈ: ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 74 ರನ್ ಗಳಿಸಿದ ವಿರಾಟ್ ಕೊಹ್ಲಿ, ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಅವರ ಜೊತೆಗಿನ ಅಂತರವನ್ನು ಭಾಗಶಃ ಕಡಿಮೆ ಮಾಡಿದ್ದಾರೆ.
ಕೊಹ್ಲಿ ತನ್ನ ಅರ್ಧಶತಕದಿಂದ ಎರಡು ಅಂಕಗಳನ್ನು ಗಳಿಸಿ 888 ಪಾಯಿಂಟ್ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಸ್ಮಿತ್ ಮೊದಲ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ಗಳಿಂದ 2 ರನ್ ಗಳಿಸಿದ್ದು, 10 ಅಂಕ ಕಡಿತಗೊಂಡರೂ 901 ಪಾಯಿಂಟ್ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಮೊದಲ ಪಂದ್ಯದಲ್ಲಿ 46 ಮತ್ತು 6 ರನ್ ಗಳಿಸಿದ ಮಾರ್ನಸ್ ಲಾಬುಶೇನ್, ಇತ್ತೀಚಿನ ಐಸಿಸಿ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ 839 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪುಜಾರ 755 ಅಂಕಗಳೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸಿದ ಸ್ಪಿನ್ನರ್ ಆರ್.ಅಶ್ವಿನ್ ಈಗ ಭಾರತದ ಅಗ್ರ ಶ್ರೇಯಾಂಕಿತ ಬೌಲರ್ ಎನಿಸಿಕೊಂಡಿದ್ದಾರೆ. ವೇಗಿ ಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿ 9ನೇ ಸ್ಥಾನದಲ್ಲಿದ್ರೆ, ಬುಮ್ರಾ 10ನೇ ಸ್ಥಾನದಲ್ಲಿದ್ದಾರೆ. ಅಡಿಲೇಡ್ ಟೆಸ್ಟ್ ಪಂದ್ಯ ಆಡದ ರವೀಂದ್ರ ಜಡೇಜಾ ಆಲ್ ರೌಂಡರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮೊದಲ ಪಂದ್ಯದಲ್ಲಿ ಏಳು ವಿಕೆಟ್ ಪಡೆದ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ 910 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ರೆ, ಜೋಶ್ ಹೆಜಲ್‌ವುಡ್ 805 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಂಪ್ ಆಗಿದ್ದಾರೆ.