ದುಬೈ:ಇಂಗ್ಲೆಂಡ್ ವಿರುದ್ಧ ಐದು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ನಂತರ ಫಾರ್ಮ್ಗೆ ಮರಳಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡ್ತಿದ್ದು, ಅದರ ಫಲವಾಗಿ ಇದೀಗ ಟಿ-20 ಶ್ರೇಯಾಂಕದಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಎರಡನೇ ಟಿ-20 ಪಂದ್ಯದಲ್ಲಿ ಅಜೇಯ 73 ಹಾಗೂ ಮೂರನೇ ಟಿ-20 ಪಂದ್ಯದಲ್ಲಿ ಅಜೇಯ 77 ರನ್ ಗಳಿಸಿರುವ ಕೊಹ್ಲಿ, ಐಸಿಸಿ ಟಿ-20 ನೂತನ ಅಂಕ ಪಟ್ಟಿಯಲ್ಲಿ 744 ಅಂಕ ಗಳಿಕೆ ಮಾಡಿ 5ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಕೆ.ಎಲ್.ರಾಹುಲ್ ಇದೀಗ ಮತ್ತೊಂದು ಸ್ಥಾನ ಕುಸಿತಗೊಂಡಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಎರಡು ಅರ್ಧಶತಕ ಸಿಡಿಸಿರುವ ಆ್ಯರೋನ್ ಫಿಂಚ್ 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದರಿಂದ ರಾಹುಲ್ ಮೂರನೇ ಸ್ಥಾನಕ್ಕೆ ಕುಸಿತಗೊಂಡಿದ್ದರು. ಆದರೆ ಇದೀಗ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಮೂರು ಪಂದ್ಯಗಳಿಂದ ಕೇವಲ 1 ರನ್ ಗಳಿಸಿದ್ದು, 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರನೇ ಸ್ಥಾನಕ್ಕೆ ಪಾಕಿಸ್ತಾನದ ಬಾಬರ್ ಆಜಂ ಲಗ್ಗೆ ಹಾಕಿದ್ದಾರೆ. ಮೊದಲನೇ ಸ್ಥಾನದಲ್ಲಿ ಡೇವಿಡ್ ಮಲಾನ್, ಎರಡನೇ ಸ್ಥಾನದಲ್ಲಿ ಫಿಂಚ್ ಇದ್ದಾರೆ.
ಇದರ ಜತೆಗೆ ಏಕದಿನ ರ‍್ಯಾಂಕಿಂಗ್ ಕೂಡ ರಿಲೀಸ್ ಆಗಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 870 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ರೋಹಿತ್ ಶರ್ಮಾ 842 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.