ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಬಿಡುಗಡೆಯಾಗಿರುವ ನೂತನ ಐಸಿಸಿ ಟಿ20 ಶ್ರೇಯಾಂಕದಲ್ಲಿ 6ನೇ ಸ್ಥಾನದಲ್ಲಿ ಸ್ಥಿರವಾಗಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಒಂದು ಕುಸಿತ ಕಂಡು 3ನೇ ರ‍್ಯಾಂಕ್ ಪಡೆದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ 2 ಅರ್ಧಶತಕ ಸಿಡಿಸಿದ ಆ್ಯರೋನ್ ಫಿಂಚ್ (830) 2 ಸ್ಥಾನ ಮೇಲೇರಿರುವುದರಿಂದ ರಾಹುಲ್ ಒಂದು ಸ್ಥಾನ ಕುಸಿತ ಅನುಭವಿಸಿದ್ದಾರೆ. ಇಂಗ್ಲೆಂಡ್ನ ಡೇವಿಡ್ ಮಲನ್(915) ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 218 ರನ್ ಸಿಡಿಸಿದ್ದ ಮಾರ್ಟಿನ್ ಗಪ್ಟಿಲ್ 8ನೇ ಸ್ಥಾನಕ್ಕೇರಿರುವ ಮೂಲಕ ಟಾಪ್ 10ಕ್ಕೆ ಮರಳಿದ್ದಾರೆ.
ಬೌಲಿಂಗ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಆಸ್ಟಿನ್ ಅಗರ್ 4 ಸ್ಥಾನಗಳ ಏರಿಕೆ ಕಂಡು 4 ಶ್ರೇಯಾಂಕ ಪಡೆದರೆ, ಕಿವೀಸ್ನ ಇಶ್ ಸೋಧಿ 3 ಸ್ಥಾನಗಳ ಏರಿಕೆ ಕಂಡು 8ನೇ ಶ್ರೇಯಾಂಕ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ಲಂಕಾದ ಸಂದಕನ್ 9 ಸ್ಥಾನಗಳ ಏರಿಕೆ ಕಂಡು 10 ನೇ ರ‍್ಯಾಂಕ್ ಪಡೆದಿದ್ದಾರೆ. ರಶೀದ್ ಖಾನ್ ಮುನ್ನಡೆಯಲ್ಲಿರುವ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಭಾರತದ ಯಾವೊಬ್ಬ ಬೌಲರ್ ಟಾಪ್ 10ರಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಭಾರತಕ್ಕೆ 2ನೇ ರ‍್ಯಾಂಕ್
ಇನ್ನು ತಂಡಗಳ ಶ್ರೇಯಾಂಕದಲ್ಲಿ ಭಾರತ ತಂಡ ಯಾವುದೇ ಸರಣಿಯನ್ನಾಡದೇ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಸ್ಟ್ರೇಲಿಯಾ(267 ಅಂಕ) ತಂಡ 3-2ರಲ್ಲಿ ಕಿವೀಸ್ ವಿರುದ್ಧ ಸರಣಿ ಕಳೆದುಕೊಂಡಿದ್ದರಿಂದ 3ನೇ ಸ್ಥಾನಕ್ಕೆ ಕುಸಿದ ಪರಿಣಾಮ ಭಾರತ(268) ಸುಲಭವಾಗಿ 2ನೇ ಸ್ಥಾನ ಪಡೆದುಕೊಂಡಿದೆ. ಇಂಗ್ಲೆಂಡ್ 275 ಅಂಕ ಪಡೆದು ಅಗ್ರಸ್ಥಾನದಲ್ಲಿದೆ.