ಲಂಡನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಅನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಜಿಂಬಾಬ್ವೆ ದೇಶದ ಕ್ರೀಡಾ ಚಟುವಟಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ತಡೆಗಟ್ಟುವಲ್ಲಿ ಕ್ರಿಕೆಟ್ ಮಂಡಳಿ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಐಸಿಸಿ ಅಮಾನತು ಮಾಡಿದೆ. ಲಂಡನ್ನಲ್ಲಿ ನಡೆದ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಚುನಾವಣೆಯನ್ನು ಸಮರ್ಪಕವಾಗಿ ನಡೆಸುವಲ್ಲಿ ಸಂಪೂರ್ಣ ಸದಸ್ಯರು ವಿಫಲವಾಗಿದ್ದಾರೆ. ಕ್ರಿಕೆಟ್ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಸಮ್ಮೇಳನದಲ್ಲಿ ಐಸಿಸಿ ಖಂಡಿಸಿದ್ದು, ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ಅಮಾನತಿಗೆ ಎಲ್ಲ ಐಸಿಸಿಯ ಸದಸ್ಯರು ಒಮ್ಮತ ಸೂಚಿಸಿದ್ದಾರೆ.
ಜಿಂಬಾಬ್ವೆ ಕ್ರಿಕೆಟ್ ಅನ್ನು ಅಮಾನತು ಮಾಡಿರುವ ಪರಿಣಾಮ ಜಿಂಬಾಬ್ವೆ ತಂಡ ಐಸಿಸಿ ಪ್ರಾಯೋಜಿತ ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಪುರುಷರ ಟಿ-20 ವಿಶ್ವಕಪ್ ಅರ್ಹತಾ ಪಂದ್ಯ ಇದೇ ಅಕ್ಟೋಬರ್ನಲ್ಲಿ ನಡೆಯಲಿದ್ದು, ಜಿಂಬಾಬ್ವೆ ಆಡುವುದು ಅನುಮಾನ ಎನ್ನಲಾಗಿದೆ.