ಸಿಡ್ನಿ: ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ಹಿನ್ನೆಲೆ ಹೆಚ್ಚು ಗೆಲುವು ಪಡೆದ ಆಧಾರದ ಮೇಲೆ ಭಾರತ ತಂಡ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಆದರೆ ಇಂಗ್ಲೆಂಡ್ ತಂಡ ಭಾರತ ತಂಡಕ್ಕಿಂತ ಬಲಿಷ್ಠವಾಗಿದ್ದರೂ ಲೀಗ್ನಲ್ಲಿ ಕಡಿಮೆ ಪಂದ್ಯ ಗೆದ್ದ ಹಿನ್ನೆಲೆ ಟೂರ್ನಿಯಿಂದ ಹೊರಬೀಳಬೇಕಾಯಿತು.
ಆದರೆ ಐಸಿಸಿ ನಿಯಮದಿಂದಲೇ 2019ರ ಏಕದಿನ ವಿಶ್ವಕಪ್ ಅನ್ನು ಇಂಗ್ಲೆಂಡ್ ಪುರುಷರ ತಂಡ ಗೆದ್ದುಕೊಂಡಿತ್ತು. ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ಆಡಿಸಲಾಗಿತ್ತು. ದುರಾದೃಷ್ಟ ಎಂದರೆ, ಸೂಪರ್ ಓವರ್ ಕೂಡ ಟೈ ಆದ್ದರಿಂದ ಪಂದ್ಯದಲ್ಲಿ ಹೆಚ್ಚು ಬೌಂಡರಿಗಳಿಸಿದ್ದ ಇಂಗ್ಲೆಂಡ್ ತಂಡವನ್ನು ವಿಜೇತ ಎಂದು ಘೋಷಣೆ ಮಾಡಲಾಗಿತ್ತು.
ಆದರೆ ಐಸಿಸಿಯ ಬೌಂಡರಿ ಲೆಕ್ಕಾಚಾರದ ನಿಯಮ ಇಡೀ ವಿಶ್ವ ಕ್ರಿಕೆಟ್ನ ಕೆಂಗಣ್ಣಿಗೆ ಗುರಿಯಾಗಿತ್ತು. ತದನಂತರ ಈ ನಿಯಮವನ್ನು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಸಭೆಯಲ್ಲಿ ತೆಗೆದು ಹಾಕಿ ಪಂದ್ಯ ನಿರ್ದಿಷ್ಠ ಫಲಿತಾಂಶ ಕಾಣುವವರೆಗೂ ಸೂಪರ್ ಓವರ್ ನಡೆಸಬೇಕು ಎಂದು ಬದಲಾಯಿಸಲಾಯಿತು.
ಆದರೆ, ಇದೀಗ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡಕ್ಕೆ ಅದೇ ಐಸಿಸಿ ನಿಯಮ ವಿಶ್ವಕಪ್ನಿಂದ ಹೊರಬೀಳುವಂತೆ ಮಾಡಿದೆ. ಭಾರತ ಮಹಿಳಾ ತಂಡ ಲೀಗ್ನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಇಂಗ್ಲೆಂಡ್ ಆಡಿದ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದು ಒಂದು ಪಂದ್ಯದಲ್ಲಿ ಸೋಲು ಕಂಡಿತ್ತು. ಆದ್ದರಿಂದ ಹೆಚ್ಚು ಪಂದ್ಯ ಗೆದ್ದ ಆಧಾರದ ಮೇಲೆ ಭಾರತ ಮಹಿಳಾ ತಂಡ ಫೈನಲ್ ಪ್ರವೇಶಿಸಿತು.
ಸೆಮಿಫೈನಲ್ನಲ್ಲಿ ಮಳೆಯಿಂದ ಆಘಾತ ಅನುಭವಿಸಿದ್ದಕ್ಕೆ ಪ್ರತಿಕ್ರಿಯಿಸಿದ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ " ಮೊದಲ ಪಂದ್ಯದ ಸೋಲಿನ ಬಳಿಕ ಕಠಿಣ ಪರಿಶ್ರಮಪಟ್ಟು ಸೆಮಿಫೈನಲ್ ಪ್ರವೇಶಿಸಿದ್ದೆವು. ಆದರೆ ಮಳೆಯಿಂದ ಒಂದು ಎಸೆತ ಕಾಣದೆ ಪಂದ್ಯ ರದ್ದಾಗಿದ್ದು ಬೇಸರ ತರಿಸಿದೆ. ನಾವು ನಿಯಮಗಳಿಗೆ ತಲೆಬಾಗಬೇಕಿದೆ. ಆದರೆ ಮುಂದಿನ ದಿನಗಳಲ್ಲಿ ಐಸಿಸಿ ಟೂರ್ನಿಗಳಲ್ಲಿ ಮೀಸಲು ದಿನವನ್ನು ಕಲ್ಪಿಸಬೇಕು, ಯಾವುದೇ ತಂಡವಾದರೂ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಅವಕಾಶ ನೀಡದೇ ಹೊರಹೋಗುವುದು ನಿಜಕ್ಕೂ ಬೇಸರ ತರಿಸಲಿದೆ " ಎಂದು ಹೇಳಿದ್ದಾರೆ.
ಇನ್ನು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು," ಸೆಮಿಫೈನಲ್ ಪಂದ್ಯ ರದ್ದಾದರೆ ಲೀಗ್ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ ಎಂದು ನಾವು ಅರಿತಿದ್ದೆವು. ಆದ್ದರಿಂದ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ನಾವು ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕೆಂಬ ದೃಷ್ಠಿಯಿಂದ ಕಣಕ್ಕಿಳಿದಿದ್ದೆವು" ಎಂದು ಸೆಮಿಫೈನಲ್ ಬಳಿಕ ನಡೆದ ಸುದ್ದಿ ಗೋಷ್ಠಿಯಲ್ಲಿ ಹೇಳಿದ್ದಾರೆ.