ಹೈದರಾಬಾದ್:ಆಸ್ಟ್ರೇಲಿಯಾ ಆತಿಥ್ಯದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಮಹತ್ವದ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಇದೀಗ ಮುಂದೂಡಿಕೆಯಾಗಿದೆ. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಹಾದಿ ಇದೀಗ ಮತ್ತಷ್ಟು ಸುಗಮಗೊಂಡಿದೆ.
ಟಿ-20 ವಿಶ್ವಕಪ್ ಪಂದ್ಯಾವಳಿ ಭವಿಷ್ಯಕ್ಕೆ ಸಂಬಂಧಿಸಿದಂತೆ ಇಂದು ಐಸಿಸಿ-ಬಿಸಿಸಿಐ ನಡುವೆ ಮಹತ್ವದ ಸಭೆ ನಡೆಯಿತು. ಈ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ವರ್ಷದ ಅಂತ್ಯದಲ್ಲಿ ನಡೆಯುವುದು ಖಚಿತಗೊಂಡಿದ್ದು, ದುಬೈನಲ್ಲಿ ಈ ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಮುಂದಿನ ವೇಳಾಪಟ್ಟಿ ಇಂತಿದೆ
- 2021ರ ಐಸಿಸಿ ಟಿ-20 ವಿಶ್ವಕಪ್ ಅಕ್ಟೋಬರ್-ನವೆಂಬರ್ (ಫೈನಲ್ ಪಂದ್ಯ ನವೆಂಬರ್ 14)
- 2022ರ ಐಸಿಸಿ ಟಿ-20 ವಿಶ್ವಕಪ್ ಅಕ್ಟೋಬರ್-ನವೆಂಬರ್ (ಫೈನಲ್ ಪಂದ್ಯ ನವೆಂಬರ್ 13)
- 2023ರ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ ಅಕ್ಟೋಬರ್-ನವೆಂಬರ್ (ಫೈನಲ್ ಪಂದ್ಯ ನವೆಂಬರ್ 26)
ಪ್ರಪಂಚದಾದ್ಯಂತ ಕೊರೊನಾ ಭೀತಿ ಹೆಚ್ಚಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಏಷ್ಯಾಕಪ್ ಕೂಡ ಮುಂದೂಡಿಕೆಯಾಗಿದೆ. ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದ್ದು, 2022ರ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.