ದುಬೈ:ಚುಟುಕು ಕ್ರಿಕೆಟ್ನಲ್ಲಿ ಕಳೆದುಹೋಗುತ್ತಿರುವ ವೈಟ್ ಜೆರ್ಸಿ ಕ್ರಿಕೆಟ್ ಮಾದರಿಯನ್ನು ಮತ್ತೆ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಐಸಿಸಿ, ಟೆಸ್ಟ್ ಚಾಂಪಿಯನ್ಶಿಪ್ಗೆ ಇಂದು ಚಾಲನೆ ನೀಡಿದೆ.
ಎರಡು ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು ಒಂಭತ್ತು ಅಗ್ರ ತಂಡಗಳು ಭಾಗವಹಿಸುತ್ತಿದ್ದು, 27 ಸರಣಿಯಲ್ಲಿ ಒಟ್ಟಾರೆ 72 ಪಂದ್ಯಗಳು ನಡೆಯಲಿವೆ.
ಆಗಸ್ಟ್ ಒಂದರಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ಆರಂಭವಾಗುವ ಆ್ಯಶಸ್ ಸರಣಿಯಿಂದ ಟೆಸ್ಟ್ ಚಾಂಪಿಯನ್ಶಿಪ್ ಶುರುವಾಗಲಿದ್ದು, ವಿಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಆಡಲಿರುವ ಎರಡು ಟೆಸ್ಟ್ ಇದೇ ಚಾಂಪಿಯನ್ಶಿಪ್ನ ಅಡಿಯಲ್ಲಿ ಬರಲಿದೆ.
ಆಗಸ್ಟ್ 1ರಿಂದ ಟೆಸ್ಟ್ ಚಾಂಪಿಯನ್ಶಿಪ್; 2 ವರ್ಷ ನಡೆಯುವ ಟೂರ್ನಿಯ ಫುಲ್ ಡಿಟೇಲ್ಸ್
ಏನಿದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್?
ಕ್ರಿಕೆಟ್ ಅಭಿಮಾನಿಗಳು ನಿಧಾನವಾಗಿ ಹೊಡಿಬಡಿ ಆಟಕ್ಕೆ ಹೊರಳುತ್ತಿದ್ದು, ಪರಿಣಾಮ ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯ ನಿಧಾನವಾಗಿ ಮೂಲೆ ಗುಂಪಾಗುತ್ತಿದೆ.
ಟೆಸ್ಟ್ ಪಂದ್ಯಗಳು ತನ್ನ ವೈಭವದ ದಿನಗಳನ್ನು ಕಳೆದುಕೊಳ್ಳುತ್ತಿರುವುದನ್ನು ಗಮನಿಸಿರುವ ಐಸಿಸಿ ಇದೇ ನಿಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭಿಸಿದೆ.
ಎರಡು ವರ್ಷಗಳ ಕಾಲ ನಡೆಯುವ ಈ ಸುದೀರ್ಘ ಚಾಂಪಿಯನ್ಶಿಪ್ನಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದ ಪಟ್ಟಿ ಅವಕಾಶ ಪಡೆದಿರುವ ಎಲ್ಲ ತಂಡಗಳು ಭಾಗವಹಿಸಲಿವೆ.
ಟೂರ್ನಿಯಲ್ಲಿ ಭಾಗವಹಿಸುವ ತಂಡಗಳೆಷ್ಟು?
ಐಸಿಸಿ ಈ ಬಾರಿ ಚಾಂಪಿಯನ್ಶಿಪ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಟಾಪ್ 9 ತಂಡಗಳಿಗೆ ಅವಕಾಶ ನೀಡಿದೆ. ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಲಿವೆ. ಜಿಂಬಾಬ್ವೆ ಹಾಗೂ ಈಗಷ್ಟೇ ಟೆಸ್ಟ್ ಕ್ರಿಕೆಟ್ ಮಾನ್ಯತೆ ಪಡೆದುಕೊಂಡಿರುವ ಐರ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಈ ಆವೃತ್ತಿಯನ್ನು ಮಿಸ್ ಮಾಡಿಕೊಳ್ಳಲಿವೆ.
ವಿಶ್ವಚಾಂಪಿಯನ್ ಶಿಪ್ನಲ್ಲಿ ಯಾವ ತಂಡ ಯಾವ ತಂಡದ ವಿರುದ್ಧ ಆಡಲಿದೆ ಚಾಂಪಿಯನ್ ಘೋಷಣೆ ಹೇಗೆ?
ಪ್ರತಿಯೊಂದು ಸರಣಿಯಲ್ಲಿ ತಂಡಗಳು ಯಾವ ರೀತಿ ಪ್ರದರ್ಶನ ನೀಡುತ್ತವೆ ಎಂಬುದರ ಆಧಾರದ ಮೇಲೆ ಅಂಕಗಳನ್ನು ಪಡೆಯಲಿವೆ. ಒಂದು ಸರಣಿಯಲ್ಲಿ 120 ಅಂಕಗಳಿದ್ದು 2 ವರ್ಷದ ಅವಧಿಯಲ್ಲಿ 720 ಅಂಕಗಳನ್ನು ಮೀಸಲಿಡಲಾಗಿದೆ. ಸರಣಿಯಲ್ಲಿ ಕನಿಷ್ಠ ಎಂದರೆ 2 ಟೆಸ್ಟ್, ಗರಿಷ್ಠ ಎಂದರೆ 5 ಟೆಸ್ಟ್ ಪಂದ್ಯಗಳು ನಡೆಯಲಿದೆ. ಅಂಕಗಳ ಸಹ ಸರಣಿಯಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ ಎಂಬುದರ ಮೇಲೆ ನಿರ್ಣಯವಾಗಲಿದೆ.
ಫೈನಲ್ಗೇರುವ ತಂಡಗಳ ಆಯ್ಕೆ ಹೇಗೆ?
ಎರಡು ವರ್ಷಗಳ ಕಾಲ ನಡೆಯುವ ಈ ಮಹಾ ಸಮರದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳೂ ಅವಕಾಶ ಪಡೆಯಲಿವೆ. ಒಂದು ವೇಳೆ ಫೈನಲ್ ಪಂದ್ಯ ಟೈನಲ್ಲಿ ಅಂತ್ಯಗೊಂಡರೆ ಯಾವ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುತ್ತದೆಯೋ ಆ ತಂಡವನ್ನು ಟೆಸ್ಟ್ ಚಾಂಪಿಯನ್ ಎಂದು ಘೋಷಣೆ ಮಾಡಲಾಗುತ್ತದೆ.