ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಿಡುಗಡೆ ಮಾಡಿರುವ ದಶಕದ ಕ್ರಿಕೆಟಿಗ ಮತ್ತು ದಶಕದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 50 ಓವರ್ಗಳಲ್ಲಿ ಭಾರತ ತಂಡದ ಪರ ಅವರು ಮಾಡಿರು ಸಾಧನೆ ಪರಿಗಣಿಸಿ ಐಸಿಸಿ, ಕೊಹ್ಲಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ರನ್ ಮಷಿನ್ ಎಂದು ಕರೆಸಿಕೊಳ್ಳುವ ವಿರಾಟ್ ಕೊಹ್ಲಿ ಈ ದಶಕದಲ್ಲಿ 10,000 ರನ್ ಸಿಡಿಸಿರುವ ವಿಶ್ವದ ಏಕೈಕ ಕ್ರಿಕೆಟಿಗರಾಗಿದ್ದಾರೆ. ಅವರು 2010-20ರ ಅವಧಿಯಲ್ಲಿ 39 ಶತಕ ಹಾಗೂ 48 ಅರ್ಧಶತಕ ಸಿಡಿಸಿದ್ದಾರೆ. ಇವರು 61.83 ಸರಾಸರಿಯೊಂದಿಗೆ ರನ್ ಗಳಿಸಿದ್ದು, 112 ಕ್ಯಾಚ್ ಕೂಡ ಪಡೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ನನ್ನ ಒಂದೇ ಒಂದು ಉದ್ದೇಶವೆಂದರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದು. ಅದನ್ನೇ ಪ್ರತೀ ಪಂದ್ಯದಲ್ಲೂ ಮಾಡಲು ಬಯಸುತ್ತೇನೆ. ಆದರೆ ಅಂಕಿ-ಅಂಶಗಳು ಕೇವಲ ಉಪ ಉತ್ಪನ್ನವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಇನ್ನು ಕೊಹ್ಲಿ 2010ರ ಅವಧಿಯಲ್ಲಿ 2011ರ ಏಕದಿನ ವಿಶ್ವಕಪ್, 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ತಂಡದ ಭಾಗವಾಗಿದ್ದಾರೆ. ಜೊತೆಗೆ 73 ಅಂತಾರಾಷ್ಟ್ರೀಯ ಶತಕ 108 ಅರ್ಧಶತಕ ಸಿಡಿಸಿರುವ ಕೊಹ್ಲಿ, ಐಸಿಸಿ ದಶಕದ ಕ್ರಿಕೆಟರ್ಗೆ ನೀಡುವ 'ಸರ್ ಗ್ಯಾರಿ ಸೋಬರ್ಸ್ ಅವಾರ್ಡ್' ಕೂಡ ಪಡೆದಿದ್ದಾರೆ.