ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮೊದಲ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿತ್ತು. ನಂತರ ತಿರುಗಿಬಿದ್ದು, 2-1ರಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ವಶಪಡಿಸಿಕೊಂಡಿತ್ತು. ಆಸೀಸ್ ನೆಲದಲ್ಲಿ ನಾಯಕನಾದ ಮೊದಲ ಟೆಸ್ಟ್ ಪಂದ್ಯದಲ್ಲೇ ರಹಾನೆ ಅದ್ಭುತ ಶತಕ ಸಿಡಿಸಿ ಬಾಕ್ಸಿಂಗ್ ಡೇ ಟೆಸ್ಟ್ ಗೆಲ್ಲಲು ನೆರವಾಗಿದ್ದರು.
ಕೇವಲ 36 ರನ್ಗಳಿಗೆ ಆಲೌಟ್ ಆದ ಕರಾಳ ನೆನಪನ್ನು ಬದಿಗೊತ್ತಿ ಹೊಸ ಹುರುಪಿನೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ತಿರುಗಿ ಬೀಳಲು ತಮಗೆ ಸಚಿನ್ ನಾಯಕರಾಗಿದ್ದ ವೇಳೆ ಎಂಸಿಜಿಯಲ್ಲಿ ಸಿಡಿಸಿದ್ದ ಶತಕ ನೆರವಾಯಿತು. ಅವರ ಬ್ಯಾಟಿಂಗ್ ವಿಡಿಯೋ ವೀಕ್ಷಣೆ ಮಾಡಿದ್ದರಿಂದ ನನ್ನಲ್ಲಿ ಉತ್ಸಾಹ ಹೆಚ್ಚಾಯಿತು ಎಂದು ರಹಾನೆ ತಿಳಿಸಿದ್ದಾರೆ.
" ನಾನು ಸಚಿನ್ ತೆಂಡೂಲ್ಕರ್ ಅವರು ನಾಯಕನಾಗಿದ್ದ ವೇಳೆ ಎಂಸಿಜಿಯಲ್ಲಿ ಶತಕ ಸಿಡಿಸಿದ್ದ ವಿಡಿಯೋವನ್ನು ಪಂದ್ಯಕ್ಕೂ ಮುನ್ನ ವೀಕ್ಷಿಸಿದ್ದೆ. ಅವರ ಇನ್ನಿಂಗ್ಸ್ ವೀಕ್ಷಿಸಿದ ನಂತರ ಬಾಕ್ಸಿಂಗ್ ಡೇ ಪಂದ್ಯದಲ್ಲಿ 116 ರನ್ ಗಳಿಸಿದೆ(ಅವರು ಸಿಡಿಸಿದ್ದು 112 ರನ್). ನಾನು ಇನ್ನಿಂಗ್ಸ್ ಆಡುವ ಹಿಂದಿನ ರಾತ್ರಿ ಸಚಿನ್ ಆಟವನ್ನು 10 ಬಾರಿ ವೀಕ್ಷಿಸಿದ್ದೆ. ಪಂದ್ಯದ ದಿನದ ಬೆಳಗ್ಗೆಯೂ 6 ರಿಂದ 7 ಬಾರಿ ವೀಕ್ಷಣೆ ಮಾಡಿದ್ದೆ. ಅವರು(ಸಚಿನ್) ಮತ್ತು ದ್ರಾವಿಡ್ ನನ್ನ ರೋಲ್ ಮಾಡೆಲ್ಗಳು" ಎಂದು ಸ್ಪೋರ್ಟ್ಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ರಹಾನೆ ತಿಳಿಸಿದ್ದಾರೆ.