ಲಂಡನ್: ಭಾರತ ತಂಡದ ವಿಶ್ವಕಪ್ ಪಯಣ ಅತ್ಯುತ್ತಮವಾಗಿ ಸಾಗಿತ್ತಾದರೂ ಸೆಮಿಫೈನಲ್ನಲ್ಲಿ ಮಳೆ ಮಾಡಿದ ಅವಾಂತರಕ್ಕೆ ಶತಕೋಟಿ ಭಾರತೀಯರ ಆಸೆ ನುಚ್ಚುನೂರಾಗಿತ್ತು. ಇನ್ನು ಕೈಯಲ್ಲಿದ್ದ ಗೆಲುವನ್ನು ಬಿಟ್ಟುಕೊಟ್ಟ ಆಟಗಾರರ ಕಥೆ ಏನಾಗಿರಬೇಡ...
ಹೌದು.. ಭಾರತ ತಂಡ ವಿಶ್ವಕಪ್ ಲೀಗ್ನಲ್ಲಿ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮಿಫೈನಲ್ನಲ್ಲಿ ಕೇವಲ 240 ರನ್ ಚೇಸ್ ಮಾಡಲಾಗದೆ 18 ರನ್ಗಳಿಂದ ಸೋಲನುಭವಿಸಿತ್ತು. ಈ ಸಂದರ್ಭದಲ್ಲಿ ಧೋನಿ ರನ್ಔಟ್ ಆಗಿದ್ದು, ಕೋಟ್ಯಂತರ ಭಾರತೀಯರಿಗೆ ಮರ್ಮಾಘಾತ ತಂದಿತ್ತು. ಹಾಗೆಯೇ ಧೋನಿ ಔಟ್ ಅಗುತ್ತಿದ್ದಂತೆ ಬ್ಯಾಟಿಂಗ್ ತೆರಳಬೇಕಿದ್ದ ಚಹಲ್ ಕಣ್ಣೀರು ಬರುತ್ತಿದ್ದರೂ ಬ್ಯಾಟಿಂಗ್ ನಡೆಸಲು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡು ಮೈದಾನಕ್ಕೆ ಆಗಮಿಸಿದ್ದ ವಿಚಾರವನ್ನು ಅವರೇ ಬಹಿರಂಗ ಪಡಿಸಿದ್ದಾರೆ.
"ಅದು ನನಗೆ ಮೊದಲ ವಿಶ್ವಕಪ್ ಆಗಿತ್ತು. ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರಿಂದ ಗೆಲುವಿನ ಫೈನಲ್ ಪ್ರವೇಶಿಸುವ ವಿಶ್ವಾಸವಿತ್ತು. ಆದರೆ ಧೋನಿ ರನ್ಔಟ್ ಆಗುತ್ತಿದ್ದಂತೆ ನಾನು ಬ್ಯಾಟಿಂಗ್ಗೆ ತೆರಳಬೇಕಿತ್ತು. ಆ ಸಮಯದಲ್ಲಿ ಕಣ್ಣೀರು ಬರುತ್ತಿದ್ದರೂ ತಡೆಯಲು ಪ್ರಯತ್ನಿಸಿದ್ದೆ. ಅಲ್ಲದೆ, ಆ ಘಟನೆ ತುಂಬಾ ಖಿನ್ನತೆಯನ್ನುಂಟು ಮಾಡಿತ್ತು" ಎಂದು ಚಹಲ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇನ್ನು ತಮ್ಮನ್ನು ದಕ್ಷಿಣ ಆಫ್ರಿಕ ವಿರುದ್ಧದ ಟಿ20 ಸರಣಿಯಿಂದ ಕೈಬಿಟ್ಟಿರುವುದರ ಕುರಿತು ಮಾತನಾಡಿರುವ ಚಹಲ್, ಟೀಂ ಮ್ಯಾನೇಜ್ಮೆಂಟ್ ತಂಡವನ್ನು ಬಲಿಷ್ಠಗೊಳಿಸುವುದಕ್ಕೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದೆ. ನಾವು ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ಅವಕಾಶ ಖಂಡಿತ ಸಿಗುತ್ತದೆ. ನಾನು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದೇನೆ. ನನಗೆ ವಿಶ್ವಕಪ್ ಗೆದ್ದ ತಂಡದಲ್ಲಿ ಇರಬೇಕೆಂಬುದು ದೊಡ್ಡ ಕನಸಾಗಿದೆ ಎಂದು ತಿಳಿಸಿದ್ದಾರೆ.