ಮುಂಬೈ:ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯನಾಗಿರುವ ಚೇತೇಶ್ವರ್ ಪೂಜಾರ 2016ರಲ್ಲಿ ತಮ್ಮದೇ ರಾಜ್ಯದ ಗುಜರಾತ್ ಲಯನ್ಸ್ ತಮ್ಮನ್ನು ಖರೀದಿಸದಿದ್ದಾಗ ತುಂಬಾ ಬೇಸರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕೊನೆಯ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ಪೂಜಾರ ಇದೀಗ 7 ವರ್ಷಗಳ ಕಾಯುವಿಕೆಯ ನಂತರ ಎಂಎಸ್ ಧೋನಿ ನಾಯಕತ್ವದ ಸಿಎಸ್ಕೆ ತಂಡ ಅವರನ್ನು 50 ಲಕ್ಷ ರೂ ಮೂಲಬೆಲೆಗೆ ಖರೀದಿಸಿದೆ. ಮುಂಬೈನಲ್ಲಿ ಅಭ್ಯಾಸ ನಡೆಸುತ್ತಿರುವ ಅವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ 2016ರಲ್ಲಿ ಐಪಿಎಲ್ಗೆ ಸೇರ್ಪಡೆಗೊಂಡಿದ್ದ ಗುಜರಾತ್ ಲಯನ್ಸ್ ಫ್ರಾಂಚೈಸಿ ನನ್ನನ್ನು ಆಯ್ಕೆ ಮಾಡದಿದ್ದಕ್ಕೆ ತುಂಬಾ ಬೇಸರಗೊಂಡಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: IPL 2021: ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಬಡ್ತಿ ಪಡೆದ ರಿಷಭ್ ಪಂತ್
33 ವರ್ಷದ ಪೂಜಾರ 30 ಐಪಿಎಲ್ ಪಂದ್ಯಗಳನ್ನಾಡಿದ್ದು, 20 ಸರಾಸರಿ, 99.7ರ ಸ್ಟ್ರೈಕ್ರೇಟ್ನಲ್ಲಿ ಕೇವಲ 390ರನ್ಗಳಿಸಿದ್ದಾರೆ. 2010ರಲ್ಲಿ ಕೆಕೆಆರ್, ನಂತರ 3 ವರ್ಷಗಳ ಕಾಲ 2011ರಿಂದ 2013ರವರೆಗೆ ಆರ್ಸಿಬಿ ಮತ್ತು 2014ರಲ್ಲಿ ಕೊನೆಯ ಬಾರಿ ಪಂಜಾಬ್ ತಂಡದಲ್ಲಿ ಆಡಿದ್ದರು. ನಂತರ ಸತತ 6 ವರ್ಷಗಳ ಹರಾಜಿನಲ್ಲಿ ಯಾವ ಫ್ರಾಂಚೈಸಿಗಳು ಪೂಜಾರ ಅವರನ್ನು ಖರೀದಿಸಿರಲಿಲ್ಲ.