ರಾಜ್ಕೋಟ್: ಸೌರಾಷ್ಟ್ರ ಮೈದಾನದಲ್ಲಿ ನಿನ್ನೆ ನಡೆದ ಬಾಂಗ್ಲಾ ವಿರುದ್ಧ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಪಂದ್ಯದಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ 43 ಎಸೆತಗಳಲ್ಲಿ 83 ರನ್ ಸಿಡಿಸಿ ಮಿಂಚು ಹರಿಸಿದ್ದರು. ಈ ವೇಳೆ ಅವರು 6 ಎಸೆತಗಳಲ್ಲಿ 6 ಸಿಕ್ಸರ್ ಎತ್ತಲು ನಿರ್ಧರಿಸಿದ್ದರಂತೆ.
ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದ ಕಹಿಯಲ್ಲಿ ಮೈದಾನಕ್ಕಿಳಿದಿದ್ದ ಟೀಂ ಇಂಡಿಯಾಗೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಈ ವೇಳೆ ಬ್ಯಾಟಿಂಗ್ ಮಾಡಲು ಕ್ರೀಸಿಗಿಳಿದ ರೋಹಿತ್ ಬಾಂಗ್ಲಾ ಬೌಲರ್ಗಳ ಮೇಲೆ ಮನಬಂದಂತೆ ಸವಾರಿ ನಡೆಸಿ, ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ-ಸಿಕ್ಸರ್ ಸುರಿಮಳೆಗೈದರು.
ಬಾಂಗ್ಲಾ ಸ್ಪಿನ್ ಬೌಲರ್ ಮೊಸಡಕ್ ಹುಸೇನ್ ಎಸೆದ 10ನೇ ಓವರ್ನಲ್ಲಿ ರೋಹಿತ್ ಶರ್ಮಾ ಎಲ್ಲ ಎಸೆತಗಳನ್ನು ಸಿಕ್ಸರ್‌ಗಟ್ಟಲು ನಿರ್ಧರಿಸಿದ್ದರಂತೆ. ಅದರಂತೆ ಮೊದಲ ಮೂರು ಎಸೆತಗಳನ್ನು ಅವರು ಸಿಕ್ಸರ್ ಗೆರೆ ದಾಟಿಸಿದ್ದಾರೆ. ಆದರೆ 4ನೇ ಎಸೆತವನ್ನು ಸಿಕ್ಸರ್ಗೆತ್ತಲು ಮುಂದಾದಾಗ ಅದು ಮಿಸ್ ಆಗಿದೆ. ಈ ವೇಳೆ ಸಿಂಗಲ್ ರನ್ ತೆಗೆದುಕೊಳ್ಳಲು ರೋಹಿತ್ ಶರ್ಮಾ ನಿರ್ಧರಿಸಿ, ಮುಂದಿನ ಎರಡು ಎಸೆತಗಳಲ್ಲಿ 2+1 ರನ್ ಕಬಳಿಸಿದ್ರು.
ಬಾಂಗ್ಲಾ ಬೌಲರ್ ಮೊಸಡಕ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮಿಂಚಿರುವ ರೋಹಿತ್ 43 ಎಸೆತಗಳಲ್ಲಿ 85 ರನ್ಗಳಿಸಿದರು. ಇದರಲ್ಲಿ ಭರ್ಜರಿ 6 ಸಿಕ್ಸರ್ ಹಾಗೂ 6 ಬೌಂಡರಿ ಒಳಗೊಂಡಿದ್ದವು. ಈ ಮೂಲಕ ಭಾರತೀಯ ನಾಯಕನೊಬ್ಬ ಟಿ-20 ಪಂದ್ಯಗಳಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ಸೃಷ್ಠಿಸಿದ್ದು ನಾಯಕನಾಗಿ 17 ಇನಿಂಗ್ಸ್ ಮೂಲಕ ಅವರು 37 ಸಿಕ್ಸರ್ ಬಾರಿಸಿದ್ರು. ಇದರ ಜತೆಗೆ 2019ರ ಸಾಲಿನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆಯನ್ನೂ ತನ್ನ ಹೆಸರಿಗೆ ಬರೆಸಿಕೊಂಡರು.