ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಂಡ ಸಮಯದಿಂದಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದು, ಸದ್ಯ ಅದೇ ತಂಡದಲ್ಲಿ ಅವರು ಆಡುತ್ತಿದ್ದಾರೆ.
ಬರೋಬ್ಬರಿ 13 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗುತ್ತಿರುವ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ಆರ್ಸಿಬಿ ಪ್ರಾಂಚೈಸಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 18 ವರ್ಷದವನಾಗಿದ್ದ ವಿರಾಟ್ ಕೊಹ್ಲಿ 2008ರಿಂದಲೂ ಆರ್ಸಿಬಿ ಭಾಗವಾಗಿದ್ದು, 2011ರಲ್ಲಿ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 2016ರ ಆವೃತ್ತಿಯಲ್ಲಿ ಅವರು 973ರನ್ ಗಳಿಸಿದ್ದರು. 2009 ಹಾಗೂ 2016ರಲ್ಲಿ ಆರ್ಸಿಬಿ ತಂಡ ಫೈನಲ್ ಪ್ರವೇಶ ಪಡೆದುಕೊಂಡಿದ್ರೂ ಪ್ರಶಸ್ತಿಗೆ ಮುತ್ತಿಕ್ಕುವಲ್ಲಿ ವಿಫಲವಾಗಿತ್ತು.
ಪ್ರಾಂಚೈಸಿ ಜತೆಗಿನ ಸಂಬಂಧದ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, 12 ವರ್ಷ ಕಳೆದು ಹೋಗಿವೆ. ಇದೊಂದು ಅದ್ಭುತ ಪ್ರಯಾಣ. ಆರ್ಸಿಬಿಯಲ್ಲಿ ಅಂತಿಮ ಗುರಿ ಸಾಧಿಸಲು ನಾನು ಬಯಸುತ್ತೇನೆ ಎಂದಿರುವ ಅವರು, ಮೂರು ಸಲ ಅಂತಿಮ ಗುರಿ ಸಾಧನೆ ಹತ್ತಿರ ಬಂದಿದ್ದೇವೆ. ಆದರೆ ಅದರಲ್ಲಿ ಯಶಸ್ವಿಯಾಗಿಲ್ಲ ಎಂದಿದ್ದಾರೆ. ಇಲ್ಲಿಯವರೆಗೆ ತಂಡವನ್ನ ತೊರೆಯುವ ಬಗ್ಗೆ ಯೋಚನೆ ಮಾಡಿಲ್ಲ. ಪ್ರಾಂಚೈಸಿ ನೀಡಿರುವ ಪ್ರೀತಿ ಮತ್ತು ಕಾಳಜಿಗೆ ನಾನು ಆಭಾರಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ದುಬೈನಲ್ಲಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದ್ದು, ಅದಕ್ಕಾಗಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಕಠಿಣ ಅಭ್ಯಾಸದಲ್ಲಿ ತೊಡಿಗಿದೆ. ಪ್ರಸಕ್ತ ಸಾಲಿನ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಆರ್ಸಿಬಿ ತಂಡ ಕೂಡ ಒಂದಾಗಿದೆ.