ಢಾಕಾ:ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಅವರಂತೆಯೇ ತಾನೂ ಕೂಡ ಬ್ಯಾಟಿಂಗ್ ಮಾಡಬಲ್ಲೆ ಎಂದು ವೆಸ್ಟ್ ಇಂಡೀಸ್ ತಂಡದ ಬ್ಯಾಟ್ಸ್ಮನ್ ಜರ್ಮೈನ್ ಬ್ಲಾಕ್‌ವುಡ್ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶದ ವಿರುದ್ಧ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದ್ದು, ಈ ವೇಳೆ ಮಾಧ್ಯಮದೊಂದಿಗೆ ಮಾತನಾಡುತ್ತಾ ಇಂಡಿಯನ್ ವಿಕೆಟ್ ಕೀಪರ್ ಪಂತ್ ಮಾದರಿಯಲ್ಲಿ ನಾನು ಕೂಡ ಬ್ಯಾಟಿಂಗ್ ಮಾಡುವುದಾಗಿ ತಿಳಿಸಿದ್ದಾರೆ.
ಪಂತ್ ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ 89 ರನ್ಗಳಿಸುವ ಮೂಲಕ ಭಾರತ ತಂಡ 2-1ರಲ್ಲಿ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದರು. ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಇತ್ತೀಚೆಗೆ ನಡೆದಿದ್ದ ಟೆಸ್ಟ್ ಸರಣಿಗಳಲ್ಲಿ ವಿಂಡೀಸ್ ತಂಡದ ಪರ ಬ್ಲಾಕ್‌ವುಡ್ ಗರಿಷ್ಟ ಸ್ಕೋರರ್ ಆಗಿದ್ದರು.
"ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯನ್ನು ನಾನು ಫಾಲೋ ಮಾಡಿದ್ದೇನೆ. ನಾಲ್ಕನೇ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಕೊನೆಯ ಒಂದು ಗಂಟೆ ಇರುವಾಗ, ಪಂತ್ ಇದ್ದರೆ ಖಂಡಿತ ಪಂದ್ಯ ಗೆಲ್ಲಿಸಿಕೊಡುತ್ತಾರೆ ಎಂದು ನಾನು ನನ್ನಲ್ಲೇ ಹೇಳಿಕೊಂಡಿದ್ದೆ. ನನ್ನ ಪ್ರಕಾರ ನಾವಿಬ್ಬರೂ ಒಂದೇ ಮಾದರಿಯ ಬ್ಯಾಟಿಂಗ್ ಶೈಲಿ ಹೊಂದಿದ್ದೇವೆ. ಅವರು ಸದಾ ರನ್ಗಳಿಸಲು ಮತ್ತು ಬೌಲರ್ಗಳ ಮೇಲೆ ಒತ್ತಡ ಹೇರುತ್ತಾರೆ. ನನ್ನದು ಕೂಡ ಅದೇ ದಾರಿಯಾಗಿದೆ" ಎಂದು ಅವರು ಹೇಳಿದರು.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮುನ್ನ ಬ್ಲಾಕ್‌ವುಡ್ ವಿಂಡೀಸ್ ತಂಡದಲ್ಲಿ ಕಡೆಗಣಿಸಲ್ಪಟ್ಟಿದ್ದರು. 3 ವರ್ಷಗಳ ಕಾಲ ಬೆಂಚ್ ಕಾಯ್ದಿದ್ದರು.
"ನಾನು ವೆಸ್ಟ್ ಇಂಡೀಸ್ ತಂಡದಿಂದ ಹೆಚ್ಚು ಕಡಿಮೆ ಮೂರು ವರ್ಷಗಳ ಕಾಲ ಹೊರಗಿದ್ದೆ ಅನ್ನಿಸುತ್ತದೆ. ಅಲ್ಲಿ ಕಡೆಗಣಿಸಲ್ಪಟ್ಟ ಮೇಲೆ ನಾನು ಮಾನಸಿಕವಾಗಿ ಸದೃಢನಾಗಲು ಸ್ವಲ್ಪ ಕೆಲಸ ಮಾಡಿದೆ. ಪ್ರತಿದಿನ ಎರಡು ಬಾರಿ ತರಬೇತಿ, ಪ್ರತಿದಿನ ಜಿಮ್ನಲ್ಲಿ ಬೆವರಿಳಿಸಿದೆ. ನಾನು ಫಿಟ್ ಆಗಿರಲು ಸಾಕಷ್ಟು ಕಠಿಣ ಶ್ರಮಪಟ್ಟಿದ್ದೇನೆ. ತಂಡಕ್ಕೆ ಮರಳಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಪಟ್ಟೆ. ಈಗ ಫಲಿತಾಂಶವನ್ನು ನೀವೇ ನೋಡಿ. ನಾನು ನನ್ನ ಶಾಟ್ ಸೆಲೆಕ್ಷನ್ನಲ್ಲಿ ಉತ್ತಮವಾಗಿದ್ದೇನೆ. ನನ್ನ ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ, ಇದನ್ನೇ ಮುಂದುವರಿಸಿಕೊಂಡು ಹೋಗಲು ಬಯಸಿದ್ದೇನೆ" ಎಂದು ಅವರು ತಿಳಿಸಿದರು.