ಮ್ಯಾಂಚೆಸ್ಟರ್: ನನ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಹಸಿವು ಇನ್ನೂ ಇದೆ, ಸದ್ಯಕ್ಕೆ ನಿವೃತ್ತಿ ನೀಡುವ ಯಾವುದೇ ಆಲೋಚನೆ ನನ್ನಲ್ಲಿಲ್ಲ ಎಂದು ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆ್ಯಂಡ್ಸರ್ಸನ್ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲಾತಾಣಗಳು ಹಾಗೂ ಕೆಲವು ಕ್ರೀಡಾ ವೆಬ್ಸೈಟ್ಗಳಲ್ಲಿ ಆ್ಯಂಡರ್ಸನ್ ನಿವೃತ್ತಿ ಘೋಷಿಸಲಿದ್ದಾರೆ ಎಂಬ ವದಂತಿ ಕೇಳಿಬಂದ ಹಿನ್ನೆಲೆ ಮಾತನಾಡಿರುವ ಆ್ಯಂಡರ್ಸನ್. ನಿವೃತ್ತಿಯ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
"ಇಲ್ಲ, ಖಂಡಿತವಾಗಿಯೂ ಇಲ್ಲ, ನನ್ನಲ್ಲಿ ಇನ್ನು ಆಟ ಆಡುವ ಹಸಿವಿದೆ. ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಪ್ರದರ್ಶನ ನೀಡದ ಕಾರಣ ನನಗೆ ಹತಾಶೆಯಾಗಿದೆ. ನನ್ನ ಸುತ್ತಲೂ ನಿವೃತ್ತಿಯ ಗುಸು ಗುಸು ಕೇಳಿಬರುತ್ತಿದೆ. ಆದರೆ ನಾನು ಅದು ನ್ಯಾಯೋಚಿತ ಎಂದು ನಾನು ಭಾವಿಸುವುದಿಲ್ಲ" ಎಂದು ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದಿರುವ ಆ್ಯಂಡರ್ಸನ್ ತಿಳಿಸಿದ್ದಾರೆ.
ಲೆಜೆಂಡರಿ ವೇಗಿ ಪಾಕಿಸ್ತಾನದ ವಿರುದ್ಧದ ಮೊದಲ ಟೆಸ್ಟ್ನಲ್ಲಿ 97 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಇದು ನನ್ನ ಪಾಲಿಗೆ ಅತ್ಯಂತ ಹತಾಶೆಯ ವಾರ. ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ನಾನು ಲಯದಲ್ಲಿ ಬೌಲಿಂಗ್ ಮಾಡಿಲ್ಲ ಎಂದು ಭಾಸವಾಗುತ್ತಿದೆ. ಇದು ಬಹುಶಃ ಕಳೆದ 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಹೀಗನ್ನಿಸುತ್ತಿದೆ. ನಾನು ಮೈದಾನದಲ್ಲಿ ಕೆಲ ಸಮಯ ಹತಾಶೆಗೊಳಗಾಗಿದ್ದೆ. ಈ ಹೀತಿ ಆಗುವುದರಿಂದ ನೀವು ಬೇಗನೆ ಬೌಲಿಂಗ್ ಮಾಡುತ್ತೀರಿ. ಇದರಿಂದ ಯಾವುದೇ ಸಹಾಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ನಾನು ಮುಂದಿನ ಎರಡು ದಿನಗಳಲ್ಲಿ ಕಠಿಣವಾಗಿ ಶ್ರಮಿಸುವ ಸಂದರ್ಭವಾಗಿದೆ. ನನ್ನ ಸಮಸ್ಯೆಗಳನ್ನು ಗುರುತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ನಾನು ಏನೆಂಬುದದನ್ನು ತೋರಿಸುತ್ತೇನೆ. ನನ್ನಲ್ಲಿ ಇನ್ನು ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಜೊತೆಗೆ ತಾವೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2021-22ರ ಆ್ಯಷಸ್ ಸರಣಿಯಲ್ಲಿ ಆಡುವುದಾಗಿಯೂ ಹೇಳಿಕೊಂಡಿದ್ದಾರೆ.
38 ವರ್ಷ ವಯಸ್ಸಿನ ಆ್ಯಂಡರ್ಸನ್ ಇಂಗ್ಲೆಂಡ್ ಪರ 154 ಟೆಸ್ಟ್ ಪಂದ್ಯಗಳನ್ನಾಡಿದ್ದು 590 ವಿಕೆಟ್ ಪಡೆದಿದ್ದಾರೆ. 184 ಏಕದಿನ ಪಂದ್ಯಗಳಿಂದ 276 ವಿಕೆಟ್ ಪಡೆದಿದ್ದಾರೆ.