ಸಿಡ್ನಿ:ಮುಂಬರುವ ಟೆಸ್ಟ್ ಸರಣಿಯಲ್ಲಿ ಭಾತೀಯ ವೇಗಿಗಳ ಶಾರ್ಟ್ ಬೌಲಿಂಗ್ ಎದುರಿಸಲು ಯಾವುದೇ ಸಮಸ್ಯೆಯಿಲ್ಲ, ತಮ್ಮ ಜೀವನದಲ್ಲಿ ಈಗಾಗಲೇ ಸಾಕಷ್ಟನ್ನು ಎದುರಿಸಿದ್ದೇನೆ ಎಂದು ಆಸೀಸ್ ಸ್ಟಾರ್ ಬ್ಯಾಟ್ಸ್ಮನ್ ಸ್ಟಿವ್ ಸ್ಮಿತ್ ಹೇಳಿದ್ದಾರೆ.
ಭಾರತದ ಬೌಲರ್ಗಳು ಶಾರ್ಟ್ ಪಿಚ್ ಬೌಲಿಂಗ್ ಪ್ರಯೋಗ ಮಾಡಿದರೆ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಗಲಿದೆ ಎಂದು ಸ್ಮಿತ್ ಹೇಳಿದ್ದಾರೆ.
ಭಾರತ ತಂಡ ಶಾರ್ಟ್ ಪಿಚ್ ಬೌಲಿಂಗ್ ಮಾಡಿ ಔಟ್ ಮಾಡಬೇಕೆಂದು ಬಯಸಿದರೆ, ಅದು ನಮ್ಮ ತಂಡಕ್ಕೆ ಅನುಕೂಲವಾಗಲಿದೆ. ಏಕೆಂದರೆ ನಾನು ನನ್ನ ಜೀವನದಲ್ಲಿ ಸಾಕಷ್ಟು ಶಾರ್ಟ್ ಬೌಲಿಂಗ್ ಎದುರಿಸಿದ್ದೇನೆ. ಹಾಗೂ ಭಾರತದ ಬೌಲರ್ಗಳಿಂದ ಹೆಚ್ಚೇನು ತೊಂದರೆಗೆ ಒಳಗಾಗುವುದಿಲ್ಲ. ಬೇಕಿದ್ದರೆ ಕಾದು ನೋಡಿ ಎಂದು ಸ್ಮಿತ್ ಹೇಳಿದ್ದಾರೆ.
ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿಯನ್ನು ಈಗಾಗಲೇ ಐಪಿಎಲ್ನಲ್ಲಿ ಎದುರಿಸಿದ್ದೇನೆ. ಹಾಗಾಗಿ ಭಾರತೀಯ ವೇಗಿಗಳಿಗೆ ನಾನು ಹೆದರುವುದಿಲ್ಲ ಎಂದು ಸ್ಮಿತ್ ತಿಳಿಸಿದ್ದಾರೆ.
ಕಳೆದ ವರ್ಷ ಕೊಹ್ಲಿ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನ 2-1ರಲ್ಲಿ ಗೆದ್ದು ಬೀಗಿತ್ತು. ಆದರೆ ಆ ಟೆಸ್ಟ್ ಸರಣಿಯಲ್ಲಿ ಸ್ಟಿವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧದಲ್ಲಿದ್ದರಿಂದ ಭಾರತದ ಗೆಲುವು ಸುಲಭವಾಗಿತ್ತು. ಆದರೆ ಈಗ ಆಸ್ಟ್ರೇಲಿಯಾ ತಂಡದಲ್ಲಿ ವಾರ್ನರ್ ಮತ್ತು ಸ್ಮಿತ್ ಕಮ್ಬ್ಯಾಕ್ ಮಾಡಿರುವುದರಿಂದ ಆಸ್ಟ್ರೇಲಿಯಾ ತಂಡಕ್ಕೆ ಆನೆ ಬಲ ಬಂದಂತಾಗಿದೆ.