ನವದೆಹಲಿ:ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಕೊನೆಗೊಂಡ ಪಂದ್ಯದಲ್ಲಿ ಭಾರತ ತಂಡ ರೋಚಕ ಡ್ರಾ ಸಾಧಿಸಿದೆ. ಪಂತ್, ಪೂಜಾರ ಹಾಗೂ ಅಶ್ವಿನ್-ವಿಹಾರಿ ಅವರ ಭರ್ಜರಿ ಆಟದ ನೆರವಿನಿಂದ ಭಾರತ ತಂಡ ಅವಿಸ್ಮರಣೀಯ ಡ್ರಾ ಸಾಧಿಸಿ ಕೊನೆಯ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ಈ ಪಂದ್ಯ ಮುಗಿಯುತ್ತಿದ್ದಂತೆ ತಂಡದಿಂದ ಕೆಲವು ಪ್ರಮುಖ ಆಟಗಾರರು ಗಾಯಗೊಂಡು ಆಸ್ಪತ್ರೆ ಸೇರಿಕೊಂಡಿದ್ದಾರೆ. ವಿಶೇಷವೆಂದರೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಘೋಷಿಸಿದ ನಂತರ ತಂಡದಲ್ಲಿ ಗಾಯಗೊಂಡವರ ಪಟ್ಟಿ ಮಾಡಿ ನೋಡಿದರೆ, ಖಂಡಿತ ಆ ತಂಡವೇ ಪ್ರಸ್ತುತ ಇರುವ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ.
ಪಂದ್ಯದ ವೇಳೆ ಗಾಯಗೊಂಡಿದ್ದ ಜಡೇಜಾ ಜೊತೆಗೆ ಅಭ್ಯಾಸ ವೇಳೆ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಹೊಟ್ಟೆ ಗಾಯದ ಸಮಸ್ಯೆ ಎದುರಿಸುತ್ತಿರುವ ಜಸ್ಪ್ರೀತ್ ಬುಮ್ರಾ ಕೂಡ ಬ್ರಿಸ್ಬೇನ್ ಟೆಸ್ಟ್ಗೆ ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಕೂಡ ಭಾರತೀಯ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
ಗಾಯಗೊಂಡವರು ಮತ್ತು ಅವರ ಈಗಿನ ಆರೋಗ್ಯ ಸ್ಥಿತಿಗತಿ:
1. ಇಶಾಂತ್ ಶರ್ಮಾ
ಭಾರತ ತಂಡದ ಹಿರಿಯ ವೇಗದ ಬೌಲರ್ ಐಪಿಎಲ್ ವೇಳೆ ಸೈಡ್ ಸ್ಟ್ರೈನ್ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಪ್ರವಾಸಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದರು. ಪ್ರವಾಸಕ್ಕೆ ಮುನ್ನ ಫಿಟ್ ಆಗಿದ್ದರಾದರೂ ಟೆಸ್ಟ್ ಕ್ರಿಕೆಟ್ ಆಡುವ ಮುನ್ನ ಬಿಸಿಸಿಐ ನಿಯಮಗಳ ಪ್ರಕಾರ ದೀರ್ಘಾವಧಿಯಲ್ಲಿ ಬೌಲಿಂಗ್ ಮಾಡಬೇಕಾಗಿರುವುದರಿಂದ ಅವರನ್ನು ಪ್ರವಾಸಕ್ಕೆ ಪರಿಗಣಿಸಿರಲಿಲ್ಲ. ಇದೀಗ ಡೆಲ್ಲಿ ಪರ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕಣಕ್ಕಿಳಿದ್ದಾರೆ. ಅವರು ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡಕ್ಕೆ ಮರಳಲಿದ್ದಾರೆ.
2. ಮೊಹಮ್ಮದ್ ಶಮಿ
ಆಸೀಸ್ ಪ್ರವಾಸಕ್ಕೆ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಮೊಹಮ್ಮದ್ ಶಮಿ ಮೊದಲ ಟೆಸ್ಟ್ ವೇಳೆ ಬ್ಯಾಟಿಂಗ್ ಮಾಡುವಾಗ ಮುಂದೋಳು ಮುರಿತಕ್ಕೆ ಒಳಗಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿರುವ ಶಮಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲೆರೆಡು ಟೆಸ್ಟ್ಗೆ ಅಲಭ್ಯರಾಗುವ ಸಾಧ್ಯತೆಯಿದೆ.
3. ಉಮೇಶ್ ಯಾದವ್
ಮತ್ತೊಬ್ಬ ಅನುಭವಿ ವೇಗಿ ಉಮೇಶ್ ಯಾದವ್ ಎರಡನೇ ಟೆಸ್ಟ್ ಪಂದ್ಯದ ವೇಳೆ ಕಣಕಾಲು ಸ್ನಾಯು ಸೆಳೆತಕ್ಕೆ ಒಳಗಾಗಿ ತವರಿಗೆ ಮರಳಿದ್ದಾರೆ. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ ಪುನಶ್ಚೇತನಕ್ಕೊಳಗಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ.
4. ಕೆ.ಎಲ್.ರಾಹುಲ್
ಐಪಿಎಲ್ ಮತ್ತು ಸೀಮಿತ ಓವರ್ಗಳ ಸರಣಿಯಲ್ಲಿ ಮಿಂಚಿದ್ದ ಕೆ.ಎಲ್.ರಾಹುಲ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯಲಿದ್ದಾರೆ ಎನ್ನುವಷ್ಟರಲ್ಲಿ ನೆಟ್ಸ್ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದರು. ಅವರು ಮಣಿಕಟ್ಟು ಗಾಯಕ್ಕೊಳಗಾಗಿರುವುದರಿಂದ ಸರಣಿಯಿಂದ ಹೊರಬಿದ್ದಿದ್ದರು. ಅವರು ಕೂಡ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.