ನವದೆಹಲಿ :ಫಿಟ್ ಇಂಡಿಯಾ ಅಭಿಯಾನದ ಮೊದಲ ವಾರ್ಷಿಕೋತ್ಸವ ಆಚರಿಸಲು ಗುರುವಾರ ಆಯೋಜಿಸಲಾಗುತ್ತಿರುವ ಫಿಟ್ ಇಂಡಿಯಾ ಸಂವಾದದಲ್ಲಿ ತಾವೂ ಭಾಗಿಯಾಗುತ್ತಿರುವುದಕ್ಕೆ ಗೌರವವಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಗುರುವಾರ ನಡೆಯುವ ವರ್ಚುವಲ್ ಸಂವಾದದಲ್ಲಿ ಕೊಹ್ಲಿ, ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವಾರು ಪ್ರಭಾವಿ ವ್ಯಕ್ತಿಗಳ ಜೊತೆ ಸಂವಾದ ನಡೆಸಲಿದ್ದಾರೆ.
"ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಫಿಟ್ ಇಂಡಿಯಾ ಸಂವಾದದ ಭಾಗವಾಗಲು ನನಗೆ ಗೌರವವಿದೆ, ಅಲ್ಲಿ ಫಿಟ್ನೆಸ್ ಮತ್ತು ಹೆಚ್ಚಿನ ವಿಚಾರಗಳ ಬಗ್ಗೆ ಮಾತನಾಡುವುದನ್ನು ನೀವು ನೋಡಬಹುದು" ಎಂದು ಕೊಹ್ಲಿ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಪ್ಯಾರಾಲಿಂಪಿಯನ್ ಚಿನ್ನದ ಪದಕ ವಿಜೇತ ದೇವೇಂದ್ರ, ಮಿಲಿಂದ್ ಸೋಮನ್, ಪೌಷ್ಟಿಕಾಂಶ ತಜ್ಞ ರುಜುತಾ ದಿವೇಕರ್,ಜಮ್ಮು-ಕಾಶ್ಮೀರದ ಮಹಿಳಾ ಫುಟ್ಬಾಲರ್ಗಳಿಗೆ ತರಬೇತಿ ನೀಡುತ್ತಿರುವ ಅಫ್ಶಾನ್ ಆಶಿಕ್ ಸೇರಿ ಹಲವಾರು ತಜ್ಞರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಇರಲಿದ್ದಾರೆ.
ಇವರೆಲ್ಲರೂ ಫಿಟ್ನೆಸ್ ಮತ್ತು ಆರೋಗ್ಯದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. 2019ರ ಆಗಸ್ಟ್ 29ರಂದು ಪ್ರಧಾನಮಂತ್ರಿ ಅವರು ಫಿಟ್ ಇಂಡಿಯಾ ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದಲ್ಲಿ ಸುಮಾರು 3.5 ಕೋಟಿ ಭಾರತೀಯರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಸುಮಾರು 30 ಕೋಟಿ ಜನರು ಫಿಟ್ನೆಸ್ ಚಾಲೆಂಜ್ನಲ್ಲಿ ತೊಡಗಿಸಿಕೊಂಡಿದ್ದರು.