ನವದೆಹಲಿ: ಕ್ರಿಕೆಟ್ ಜಗತ್ತಿನ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರಾದ ಪಾಕ್ ವೇಗಿ ಶೋಯಬ್ ಅಖ್ತರ್ ಬೌಲಿಂಗ್ ಕಠಿಣ ಎಂಬ ಮಾತನ್ನು ಭಾರತ ತಂಡ ಮಾಜಿ ಆಲ್‌ರೌಂಡರ್ ಮೊಹಮ್ಮದ್ ಕೈಫ್ ಪುತ್ರ ಅಲ್ಲಗೆಳೆದಿದ್ದಾರೆ.
ಕೈಫ್ ಪುತ್ರನ ಪ್ರಕಾರ, ಅಖ್ತರ್ ಅವರ ವೇಗದ ಬೌಲಿಂಗ್ ಬ್ಯಾಟ್ಸ್ಮನ್ಗಳಿಗೆ ರನ್ಗಳಿಸಲು ತುಂಬಾ ಸಹಕಾರಿ ಎಂದಿದ್ದಾರೆ.
2003ರ ಏಕದಿನ ವಿಶ್ವಕಪ್ನಲ್ಲಿ ಭಾರತ vs ಪಾಕಿಸ್ತಾನದ ನಡುವೆ ಸೆಂಚುರಿಯನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದ ಹೈಲೆಟ್ಸ್ ವೀಕ್ಷಿಸಿ ಅವರು ಈ ರೀತಿ ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ ಇತ್ತೀಚೆಗೆ ಈ ಪಂದ್ಯವನ್ನು ಮರು ಪ್ರಸಾರ ಮಾಡಿತ್ತು.
ಈ ವಿಚಾರವನ್ನು ತಮ್ಮ ಟ್ವಿಟರ್ನಲ್ಲಿ ತಿಳಿಸಿರುವ ಕೈಫ್, ಜೂನಿಯರ್ ತನ್ನ ಪಪ್ಪನ ಪ್ರದರ್ಶನದ ಬಗ್ಗೆ ಹೆಚ್ಚು ಆಕರ್ಷಿತನಾಗಿಲ್ಲ. ಶೋಯಬ್ ಅಖ್ತರ್ ಬೌಲಿಂಗ್ ವೇಗ ಹೆಚ್ಚಿರುವ ಕಾರಣ ರನ್ ಗಳಿಸುವುದು ತುಂಬಾ ಸುಲಭ ಎಂದು ಹೇಳಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕೈಫ್ ಟ್ವೀಟ್ಗೆ ತಕ್ಷಣ ರಿಪ್ಲೈ ಮಾಡಿರುವ ಅಖ್ತರ್, ತಮ್ಮ ಮಗ ಮಿಕಾಯಿಲ್ ಮತ್ತು ಕಬೀರ್ ನಡುವೆ ಪಂದ್ಯ ಏರ್ಪಾಡು ಮಾಡಿ ಎಂದು ತಿಳಿಸಿದ್ದಾರೆ.
2003 ಮಾರ್ಚ್ 1 ರಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಪಂದ್ಯದಲ್ಲಿ 7 ವಿಕೆಟ್ ಕಳೆದುಕೊಂಡ ಪಾಕ್ 273 ರನ್ ರನ್ಗಳಿಸಿತ್ತು. ಭಾರತ ತಂಡ 6 ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿ ವಿಜಯಿಯಾಗಿತ್ತು. ಈ ಪಂದ್ಯದಲ್ಲಿ ಕೈಫ್ 60 ಎಸೆತಗಳಲ್ಲಿ 35 ರನ್ಗಳಿಸಿದ್ದರು.