ಅಡಿಲೇಡ್: ಟೆಸ್ಟ್ ಕ್ರಿಕೆಟ್ ಎಂದರೆ ಕೇವಲ ತಾಳ್ಮೆಯ ಆಟವಲ್ಲ, ಅಲ್ಲೂ ಸರಾಗವಾಗಿ ರನ್ ಗಳಿಸಬಹುದು ಎಂದು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟ ವೀರೇಂದ್ರ ಸೆಹ್ವಾಗ್ ಎಂದೋ ನೀಡಿದ್ದ ಕೆಲವು ಸಲಹೆಗಳನ್ನು ತ್ರಿಶತಕ ವೀರ ಡೇವಿಡ್ ವಾರ್ನರ್ ಸ್ಮರಿಸಿದ್ದಾರೆ.
ತ್ರಿಶತಕ ಸಿಡಿಸಿದ ನಂತರ ಮಾತನಾಡಿದ ವಾರ್ನರ್, ತಮ್ಮ ಟೆಸ್ಟ್ ವೃತ್ತಿ ಜೀವನಕ್ಕೂ ಆರಂಭದಲ್ಲೇ ಭವಿಷ್ಯದಲ್ಲಿ ಟಿ20ಗಿಂತಲೂ ಅತ್ಯುತ್ತಮ ಬ್ಯಾಟ್ಸ್ಮನ್ ಆಗುತ್ತೀರಿ ಎಂದು ಹೇಳಿದ್ದರು. ಅದಕ್ಕೆ ಅವರು ಕೆಲವು ಟಿಪ್ಸ್ಗಳನ್ನೂ ನೀಡಿದ್ದರು. ಅವುಗಳನ್ನು ನಾನು ಅನುಸರಿಸಿಕೊಂಡಿದ್ದೇನೆ ಎಂದು ವಾರ್ನರ್ ನೆನಪಿಸಿಕೊಂಡರು.
ವಾರ್ನರ್ ಪಾಕ್ ಬೌಲರ್ಗಳನ್ನು ಎರಡು ದಿನಗಳ ಕಾಲ ಕಾಡಿದ್ದಲ್ಲದೆ, 335 ರನ್ಗಳನ್ನು ಬಾರಿಸಿ 88 ವರ್ಷಗಳ ಹಿಂದಿನ ಬ್ರಾಡ್ಮನ್ (334) ದಾಖಲೆಯನ್ನು ಹಿಂದಿಕ್ಕಿದರು. ಇದ್ರ ಜೊತೆಗೆ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ಆಸ್ಟ್ರೇಲಿಯಾದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
335 ರನ್ ಗಳಿಸಿದ್ದ ವಾರ್ನರ್ ಬ್ರಯಾನ್ ಲಾರಾ(400) ದಾಖಲೆ ಮುರಿಯುವ ಅವಕಾಶವಿತ್ತು. ಆದರೆ, ಟಿಮ್ ಪೇನ್ ಡಿಕ್ಲೇರ್ ಘೋಷಿಸಿದ್ದರಿಂದ ಬಹುಕಾಲದ ಲಾರಾ ದಾಖಲೆ ಆಗಿಯೇ ಉಳಿಯಿತು. ಆದರೆ ವಾರ್ನರ್ ಹೇಳಿಕೆಯಂತೆ ನಾವು ಯಾವಾಗ ಡಿಕ್ಲೇರ್ ಘೋಷಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದೆವು. ಆ ಪ್ರಕಾರವೇ ಪೇನ್ ಕೂಡ ನಡೆದುಕೊಂಡರು. ವೈಯಕ್ತಿಕ ದಾಖಲೆಗಳಿಗಿಂತ ತಂಡದ ಹಿತಾಸಕ್ತಿಯೇ ಮುಖ್ಯ ಎಂದು ವಾರ್ನರ್ ತಮ್ಮ ನಾಯಕನ ನಿರ್ಧಾರವನ್ನು ಎತ್ತಿ ಹಿಡಿದಿದ್ದಾರೆ.