ನವದೆಹಲಿ: ದಾನೀಶ್ ಕನೇರಿಯಾ ಹಿಂದೂ ಎಂಬ ಕಾರಣಕ್ಕೆ ಪಾಕ್ ಸಹ ಪ್ಲೇಯರ್ಸ್ ಅನುಚಿತ ವರ್ತನೆ ತೋರಿರುವ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಕಮ್ ಸಂಸದ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆಯನ್ನ ಖಂಡಿಸಿರುವ ಗೌತಮ್ ಗಂಭೀರ್, ಇದು ಪಾಕಿಸ್ತಾನದ ನಿಜವಾದ ಮುಖ. ಅಲ್ಪಸಂಖ್ಯಾತರಾಗಿದ್ದರೂ ಸಹ ಮೊಹಮ್ಮದ್ ಅಜರುದ್ದೀನ್ ಅವರು ದೀರ್ಘಕಾಲ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದರು. ಇಮ್ರಾನ್ ಖಾನ್ ಅವರೇ ಪ್ರಧಾನಮಂತ್ರಿಯಗಿದ್ದರೂ ತಮ್ಮ ದೇಶ ಪ್ರತಿನಿಧಿಸುವ ಕ್ರೀಡಾಪಟು ಈ ಎಲ್ಲ ಸಮಸ್ಯೆ ಎದುರಿಸಿ ಸಾಗಬೇಕಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಇದೇ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ಆಟಗಾರ ಮದನ್ ಲಾಲ್, ನಾನು ಗಮನಿಸಿರುವ ಅಂಶ ಏನೆಂದರೆ ಪಾಕಿಸ್ತಾನದ ಪರ ಆಡಿದ ಹಿಂದೂ ಆಟಗಾರರು ನಮ್ಮೊಂದಿಗೆ ಹೆಚ್ಚು ಬೆರೆಯುತ್ತಿದ್ದರು. ನಮ್ಮ ಜೊತೆ ಹೆಚ್ಚು ಮಾತನಾಡಲು ಬಯಸುತ್ತಿದ್ದರು ಎಂದಿದ್ದಾರೆ.
ಒಂದೇ ತಂಡದ ಆಟಗಾರರಾಗಿ ಸಹ ಆಟಗಾರನನ್ನ ಬೆಂಬಲಿಸಬೇಕು. ಪಾಕಿಸ್ತಾನದ ಆಟಗಾರರ ಇಂತಹ ವರ್ತನೆಗೆ ಅವರಿಗಿರುವ ಶಿಕ್ಷಣದ ಕೊರತೆಯೇ ಕಾರಣ ಎಂದಿದ್ದಾರೆ. ಎರಡೂ ದೇಶದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಆದರೆ, ಶಿಕ್ಷಣದ ಕೊರತೆಯೇ ಪಾಕ್ ತಂಡದ ಆಟಗಾರರ ಸಮಸ್ಯೆ ಎಂದಿದ್ದಾರೆ.
ವಿವಿಧ ಧರ್ಮೀಯರು ಭಾರತ ತಂಡ ಪ್ರತಿನಿದಿಸಿದ್ದಾರೆ. ಆದರೆ, ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಂದೂ ಇಂತಹ ಘಟನೆ ಸಂಭವಿಸಿಲ್ಲ. ಕನೇರಿಯಾ ಪಾಕ್ ತಂಡದ ಓರ್ವ ಪ್ರತಿಭಾನ್ವಿತ ಸ್ಪಿನ್ನರ್. ನಿಜಕ್ಕೂ ಇಂತಹ ವಿಷಯಗಳನ್ನ ಕೇಳಲು ಬೇಸರವಾಗುತ್ತದೆ ಎಂದಿದ್ದಾರೆ ಮದನ್ ಲಾಲ್.