ನವದೆಹಲಿ :ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಇಂದು 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. ತಂಡದ ಸಹ ಆಟಗಾರರಾದ ವಿರಾಟ್ ಕೊಹ್ಲಿ, ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಜುನ ಪ್ರಶಸ್ತಿ ಪುರಸ್ಕೃತನಿಗೆ ಶುಭಾಶಯ ಕೋರಿದ್ದಾರೆ.
13ನೇ ಆವೃತ್ತಿಯ ಐಪಿಎಲ್ನಲ್ಲಾಡಲು ಇಶಾಂತ್ ಡೆಲ್ಲಿ ಕ್ಯಾಪಿಟಲ್ ತಂಡದ ಜೊತೆ ಯುಎಇಗೆ ತೆರಳಿದ್ದಾರೆ. 13 ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ನಡೆಯಲಿದೆ.
ಹುಟ್ಟು ಹಬ್ಬದ ಶುಭಾಶಯಗಳು ಇಶಾಂತ್ ಶರ್ಮಾ, ನಿಮ್ಮ ಪಾಲಿಗೆ ಈ ವರ್ಷ ಅದ್ಭುತ ಮತ್ತು ಯಶಸ್ವಿಯಾಗಿರಲೆಂದು ಹಾರೈಸುವೆ. ಈ ದಿನವನ್ನು ಎಂಜಾಯ್ ಮಾಡಿ ಎಂದು ಸ್ವತಃ ದೆಹಲಿಯವರೇ ಆದ ವಿರಾಟ್ ಕೊಹ್ಲಿ ತಮ್ಮದೇ ರಾಜ್ಯದ ಕ್ರಿಕೆಟಿಗನಿಗೆ ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ತಂಡದ ಪರವೇ ಆಡಲಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಕೂಡ ಟ್ವಿಟರ್ನಲ್ಲಿ ಶುಭಕೋರಿದ್ದು, ನಿಮ್ಮ ಜೊತೆ ಉತ್ತಮವಾದ ಆವೃತ್ತಿಯನ್ನು ನೋಡುವುದಕ್ಕಾಗಿ ಕಾಯುತ್ತಿದ್ದೇನೆ ಎಂದು ಬರೆದುಕೊಂಡು ಜನ್ಮದಿನದ ಶುಭಾಶಯ ಕೋರಿದ್ದಾರೆ.
ಡೆಲ್ಲಿ ಕ್ಯಾಪಿಟಲ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಹುಟ್ಟು ಹಬ್ಬದ ಶುಭಾಶಯಗಳು ಇಶಾಂತ್ ಶರ್ಮಾ, ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಅಭಿನಂದನೆಗಳು ಮತ್ತು ಈ ಋತುವಿನಲ್ಲಿ ನಿಮ್ಮ ಜೊತೆ ಆಡುವುದಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಪರ 80 ಏಕದಿನ ಪಂದ್ಯಗಳಿಂದ 115 ವಿಕೆಟ್, 97 ಟೆಸ್ಟ್ ಪಂದ್ಯಗಳಿಂದ 297 ವಿಕೆಟ್ ಹಾಗೂ 14 ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿರುವ ಇಶಾಂತ್ ಶರ್ಮಾಗೆ ಹಲವಾರು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.