ಕರ್ನಾಟಕ

karnataka

ETV Bharat / sports

ಮಹಿಳೆಯರ ಕ್ರಿಕೆಟ್‌ಗೆ​ ತೋರುದೀಪವಾದ ಹರ್ಮನ್‌ ಪ್ರೀತ್‌ ಕೌರ್‌ ಇನ್ನಿಂಗ್ಸ್! - 2017 ವಿಶ್ವಕಪ್​

ಪುರುಷರ ವಿಭಾಗದ ಕ್ರಿಕೆಟ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 2017ರಲ್ಲಿ ಮಹಿಳಾ ವಿಶ್ವಕಪ್​ನಲ್ಲಿ ಪುರುಷರ ಕ್ರಿಕೆಟ್​ನಂತೆಯೇ ಹಣ ಹೂಡಲು ನಿರ್ಧರಿಸಿತ್ತು.​ ಮಹಿಳೆಯರನ್ನು ಕ್ರೀಡೆಯಲ್ಲಿ ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿತ್ತು. ಅಚ್ಚರಿಯೆಂದರೆ, ಭಾರತದಲ್ಲಿ ಜನರು ಮಹಿಳಾ ಕ್ರಿಕೆಟ್​ ಆಟವನ್ನು ನಿರೀಕ್ಷೆಗೂ ಮೀರಿ ಸ್ವೀಕರಿಸಿದರು.

ಹರ್ಮನ್ ಪ್ರೀತ್ ಕೌರ್​
ಹರ್ಮನ್ ಪ್ರೀತ್ ಕೌರ್​

By

Published : Mar 8, 2021, 7:31 PM IST

ಹೈದರಾಬಾದ್​: ಭಾರತ ಟಿ20 ತಂಡದ ನಾಯಕಿ ಹರ್ಮನ್​ ಪ್ರೀತ್ ಕೌರ್​ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ ಪಂಜಾಬ್​ನ ಸ್ಟಾರ್​ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ವಿಶೇಷ.

ಭಾರತ ತಂಡದಲ್ಲಿ ಆಲ್​ರೌಂಡರ್, ನಾಯಕಿಯಾಗಿ ಮಹಿಳಾ ಕ್ರಿಕೆಟ್​ನಲ್ಲಿ ಗುರುತಿಸಿಕೊಂಡಿರುವ ಹರ್ಮನ್ ಪ್ರೀತ್​ ಕೌರ್,​ ದೇಶದಲ್ಲಿ ಮಹಿಳೆಯರ ಕ್ರಿಕೆಟ್​ಗೆ ಹೊಸ ಸ್ವರೂಪ ಕೊಡುವಲ್ಲಿ ಕಾರಣಕರ್ತರು. ಅವರು ಆಡಿದ ಸ್ಮರಣೀಯ ಆ ಒಂದು ಇನ್ನಿಂಗ್ಸ್​ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

ಪುರುಷರ ವಿಭಾಗ ಕ್ರಿಕೆಟ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 2017ರಲ್ಲಿ ಮಹಿಳಾ ವಿಶ್ವಕಪ್​ನಲ್ಲಿ ಪುರುಷರ ಕ್ರಿಕೆಟ್​ನಂತೆಯೇ ಹಣ ಹೂಡಲು ನಿರ್ಧರಿಸಿತ್ತು.​ ಮಹಿಳೆಯರನ್ನು ಕ್ರೀಡೆಯಲ್ಲಿ ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿತ್ತು. ಅಚ್ಚರಿಯೆಂದರೆ, ಭಾರತದಲ್ಲಿ ಜನರು ಮಹಿಳಾ ಕ್ರಿಕೆಟ್​ ಆಟವನ್ನು ನಿರೀಕ್ಷೆಗೂ ಮೀರಿ ಸ್ವೀಕರಿಸಿದರೆಂಬುದು ವಿಶೇಷ.

ಹರ್ಮನ್ ಪ್ರೀತ್ ಕೌರ್ (ಸಂಗ್ರಹ ಚಿತ್ರ)​

ಎರಡು ದಶಕಗಳಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್​ ಚಾಲ್ತಿಯಲ್ಲಿದ್ದರೂ ಕೂಡ ಯಾರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ವಿಚಾರವೇ ಹೆಚ್ಚು ಜನಕ್ಕೆ ತಿಳಿಯುತ್ತಿರಲಿಲ್ಲ. ಆದ್ರೆ 2017ರ ವಿಶ್ವಕಪ್​ ಸೆಮಿಫೈನಲ್​ನಲ್ಲಿ ನಂಬರ್ ಒನ್​ ಹಾಗೂ ಚಾಂಪಿಯನ್​ ಆಸ್ಟ್ರೇಲಿಯಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್​ ನಡೆಸಿದ್ದ ಪಂಜಾಬ್​ನ ಹುಡುಗಿ ಹರ್ಮನ್​ ಪ್ರೀತ್​ ಕೌರ್​ ನಿಜಕ್ಕೂ ಭಾರತದ ಮನೆಮಾತಾದರಲ್ಲದೆ, ಮಹಿಳೆಯರ ಕ್ರಿಕೆಟ್​ನತ್ತಲೂ ಲಕ್ಷಾಂತರ ಜನರನ್ನು ಸೆಳೆದರು.

ಮಿಥಾಲಿ ರಾಜ್​ ನೇತೃತ್ವದ ಭಾರತ ತಂಡ ವಿಶ್ವಕಪ್​ಗೆ ಕ್ವಾಲಿಫೈಯರ್​ ಮೂಲಕ ಪ್ರವೇಶ ಪಡೆದಿದ್ದರಿಂದ ಸೆಮಿಫೈನಲ್ ಪ್ರವೇಶಿಸಿದ್ದು ಭಾರತ ತಂಡದ ಅತ್ಯುತ್ತಮ ಪ್ರದರ್ಶನ ಎಂದು ಬಿಂಬಿಸಲಾಗಿತ್ತು. ಏಕೆಂದರೆ ಸೆಮಿಫೈನಲ್​ನಲ್ಲಿ ಭಾರತಕ್ಕೆ ಎದುರಾಗಿದ್ದು ಹಾಲಿ ಚಾಂಪಿಯನ್ ಹಾಗೂ ಏಕದಿನ ಕ್ರಿಕೆಟ್​ನ ನಂಬರ್​ ಒನ್​ ತಂಡ​ ಆಸ್ಟ್ರೇಲಿಯಾ.!

ಸೆಮಿಫೈನಲ್​ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಆಸ್ಟ್ರೇಲಿಯಾ ಲೀಗ್​ನಲ್ಲಿ ಮಣಿಸಿತ್ತು. ಇದು ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದರಿಂದ ನಂಬರ್​ ಒನ್​ ತಂಡವನ್ನು ಸೋಲಿಸುವುದು ಅಸಾಧ್ಯ ಎಂದು ನಂಬಲಾಗಿತ್ತು. ಆದರೆ ಹರ್ಮನ್​ ಪ್ರೀತ್​ ಕೌರ್​ ಎಂಬ ಯುವ ಆಟಗಾರ್ತಿಯ ಆಟ ವಿಶ್ವ ಕ್ರಿಕೆಟನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಆ ಪಂದ್ಯ ಭಾರತದ ಮಹಿಳಾ ಕ್ರಿಕೆಟ್ ಅನ್ನು​ ಇತಿಹಾಸ ಪುಟ ಸೇರುವಂತೆ ಮಾಡಿತ್ತು.

ಹರ್ಮನ್ ಪ್ರೀತ್ ಕೌರ್​ (ಸಂಗ್ರಹ ಚಿತ್ರ)

ಮಳೆಯ ಕಾರಣ 42 ಓವರ್​ಗಳಿಗೆ ಸೀಮಿತಗೊಳಿಸಿದ್ದ ಆ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್​ 25 ನೇ ಓವರ್​ನಲ್ಲಿ ತಂಡದ ಮೊತ್ತ 101ರನ್ ​ಗಳಿಸಿದ್ದ ವೇಳೆ ಔಟಾದರು. ಅಲ್ಲಿಯವರೆಗೆ ಮಿಥಾಲಿ ರಾಜ್​ ನಂಬಿಕೊಂಡಿದ್ದ ತಂಡದಲ್ಲಿ ಸೋಲಿನ ಛಾಯೆ ಮೂಡಿತ್ತು. ಆದರೆ ಯುವ ಆಲ್​ರೌಂಡರ್​ ದೀಪ್ತಿ ಶರ್ಮಾರನ್ನು ಜೊತೆಗೂಡಿದ ಪಂಜಾಬ್​ನ ಹರ್ಮನ್​ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಈಗಾಗಲೇ ಬಿಗ್​ಬ್ಯಾಶ್​ ಲೀಗ್​ನಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಎದುರಿಸಿದ್ದ ಅವರು ಏಕಾಂಗಿಯಾಗಿ ಆಸೀಸ್​ ಬೌಲರ್​ಗಳ ಸವಾಲಿಗೆ​ ತಮ್ಮ ಅಗ್ರೆಸಿವ್​ ಬ್ಯಾಟಿಂಗ್ ಮೂಲಕ ಉತ್ತರಿಸಿದ್ದರು.

ಆರಂಭದಲ್ಲಿ 60 ಎಸೆತಗಳಿಗೆ 40 ರನ್ ​ಗಳಿಸಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಕೌರ್​ ನಂತರ ಸ್ಟಂಪ್​ ಔಟ್​ ಚಾನ್ಸ್​ನಿಂದಲೂ ಬಚಾವ್​ ಆಗಿದ್ದರು. ನಂತರ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೌರ್​ ನಂತರ ಕೇವಲ 4 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಹಂತದಲ್ಲಿ ದೀಪ್ತಿ ಶರ್ಮಾರ ಗೊಂದಲದಿಂದ ಮತ್ತೊಮ್ಮೆ ಔಟ್ ಆಗುವ ​ಸಂಭವ ಕೂಡ ನಿರ್ಮಾಣವಾಗಿತ್ತು. ಆದ್ರೆ ಸ್ವಲ್ಪದರಲ್ಲೇ ಬಚಾವ್​ ಆದ ಅವರು ಮೈದಾನದಲ್ಲೇ ದೀಪ್ತಿ ಮೇಲೆ ಸಿಟ್ಟಾಗಿ ಬೈಯ್ದಿರುವ ಘಟನೆಯೂ ನಡೆದಿತ್ತು.

ಹರ್ಮನ್ ಪ್ರೀತ್ ಕೌರ್ (ಸಂಗ್ರಹ ಚಿತ್ರ)​

ಆದರೂ ಆಟದ ಕಡೆ ಮತ್ತೆ ಗಮನಹರಿಸಿದ ಕೌರ್​ 82 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅಲ್ಲಿಯವರೆಗೆ ಅವರ ಸ್ಟ್ರೈಕ್​ ರೇಟ್​ 111.11 ಇತ್ತು. ಕೌರ್​ 100 ರಿಂದ 150 ತಲುಪಲು ತೆಗೆದುಕೊಂಡಿದ್ದು ಕೇವಲ 17 ಎಸೆತ. ಅಲ್ಲದೆ ನಂತರದ 8 ಎಸೆತಗಳಲ್ಲಿ 21 ರನ್​ ಸಿಡಿಸಿದ್ದರು. ಒಟ್ಟಾರೆ 115 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್​ ಹಾಗೂ 20 ಬೌಂಡರಿ ಸಹಿತ 171 ರನ್​ ಸಿಡಿಸಿದ್ದರು.

ಈ ಪಂದ್ಯವನ್ನು ಭಾರತ ತಂಡ 36 ರನ್​ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಹರ್ಮನ್​ ಪ್ರೀತ್ ಕೌರ್​ರ ಅದೊಂದು ಇನ್ನಿಂಗ್ಸ್​ ಭಾರತದಲ್ಲಿ ಮಹಿಳಾ ಕ್ರಿಕೆಟ್​ ಬಗ್ಗೆ ಕಿಚ್ಚೆಬ್ಬಿಸಿತು. ಫೈನಲ್​ವರೆಗೆ ಇಡೀ ದೇಶವೇ ಭಾರತದ ಮಹಿಳೆಯರು ವಿಶ್ವಕಪ್​ ಎತ್ತಿ ಹಿಡಿಯಲಿ ಎಂದು ಪ್ರಾರ್ಥಿಸಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಬಳಕೆಯಾದ #WWC2017 ಎಂಬುದು ಆ ವರ್ಷದಲ್ಲಿ​ ಅತಿ ಹೆಚ್ಚು ಬಳಕೆಯಾದ ಹ್ಯಾಶ್​ಟ್ಯಾಗ್ ಆಗಿತ್ತು. ಅದರರ್ಥ ಐಸಿಸಿ ಶ್ರಮ ಹಾಗೂ ಅದರ ಮಹತ್ವದ ಯೋಜನೆ ಫಲಕೊಟ್ಟಿತ್ತು.

ಆಸ್ಟ್ರೇಲಿಯಾದಂತಹ ಪ್ರಬಲ ಎದುರಾಳಿಯನ್ನು ಮಣ್ಣುಮುಕ್ಕಿಸಿದ ಭಾರತ ತಂಡ ಮಹಿಳಾ ಕ್ರಿಕೆಟ್​ ದಿಕ್ಕನ್ನೇ ಬದಲಾಯಿಸಿತೆಂದರೆ ಅಚ್ಚರಿಯಲ್ಲ. ಅದಕ್ಕೆ ಕಾರಣ ಒಂದು ಇನ್ನಿಂಗ್ಸ್​. ಅದು ಪಂಜಾಬ್​ನ ಮೊಗಾ ಪ್ರಾಂತ್ಯದ ಹುಡುಗಿ ಹರ್ಮನ್​ ಪ್ರೀತ್​ ಕೌರ್​ ಎಂಬುದನ್ನು ಕ್ರಿಕೆಟ್​ ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ.

ಇಂದು 32 ನೇ ವಸಂತಕ್ಕೆ ಕಾಲಿಟ್ಟಿದ್ದು, ಇನ್ನಷ್ಟು ಕಾಲ ಭಾರತ ತಂಡದಲ್ಲಿ ಆಡಿ, ಮಹಿಳಾ ಕ್ರಿಕೆಟ್ ಅನ್ನು​ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬುದು ಭಾರತೀಯರ ಆಶಯ.

ABOUT THE AUTHOR

...view details