ಅಬುಧಾಬಿ:ಅಮೆರಿಕದಲ್ಲಿ ಪೊಲೀಸರಿಂದ ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ಜನಾಂಗದ ವ್ಯಕ್ತಿ ಹತ್ಯೆಯಾದ ನಂತರ ಕ್ರೀಡಾಲೋಕದಲ್ಲಿ 'ಬ್ಲಾಕ್ ಲೈವ್ಸ್ ಮ್ಯಾಟರ್' ಎಂಬ ಆಂದೋಲನ ನಡೆಯುತ್ತಿದೆ.
ಈ ಆಂದೋಲನಕ್ಕೆ ಈಗಾಗಲೇ ಇಂಗ್ಲೆಂಡ್ನಲ್ಲಿ ನಡೆದ ಕೆಲವು ಸರಣಿ, ಸಿಪಿಎಲ್ನಲ್ಲಿ ಹಾಗೂ ಫುಟ್ಬಾಲ್ ಲೀಗ್ಗಳಲ್ಲೂ ಬೆಂಬಲ ಸೂಚಿಸಿ ಕಪ್ಪು ಜನಾಂಗದವರ ಮೇಲಿನ ದೌರ್ಜನ್ಯ ಖಂಡಿಸಲಾಗುತ್ತಿದೆ. ಅವರನ್ನು ಸಾಮಾನ್ಯ ಮನುಷ್ಯರಂತೆ ನೋಡಬೇಕು ಎಂದು ಜಾಗೃತಿ ನೀಡಲಾಗುತ್ತಿದೆ.
ವಿಶ್ವ ದ ಹಲವು ಟೂರ್ನಿಗಳಲ್ಲಿ ಈ ಆಂದೋಲನಕ್ಕೆ ಬೆಂಬಲ ಸಿಕ್ಕಿತ್ತು. ಆದರೆ, ಭಾರತದಲ್ಲಿ ಪ್ರಮುಖ ಕ್ರೀಡಾಕೂಟಗಳ ವೇಳೆ 'ಬ್ಲಾಕ್ ಲೈವ್ಸ್ ಮ್ಯಾಟರ್' ಗಮನ ಸೆಳೆದಿರಲಿಲ್ಲ. ಇದನ್ನು ಹೋಲ್ಡರ್ ಕೂಡ ನೆನಪಿಸಿ ಕೆಲವು ದಿನಗಳ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.
ಆದರೆ, ಭಾನುವಾರ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಹಾರ್ದಿಕ್ ಪಾಂಡ್ಯ ಅದ್ಭುತ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ರು. ಈ ವೇಳೆ ಮಂಡಿಯೂರಿ ಕುಳಿತು 'ಬ್ಲ್ಯಾಕ್ ಲೈವ್ಸ್ ಮ್ಯಾಟರ್'ಗೆ ತಮ್ಮ ಬೆಂಬಲವನ್ನು ಸೂಚಿಸಿ ಎಲ್ಲರ ಗಮನ ಸೆಳೆದರು. ನಿನ್ನ ಮುಂಬೈ ನಾಯಕರಾಗಿದ್ದ ಪೊಲಾರ್ಡ್ ಕೂಡ ಪಾಂಡ್ಯರ ಕಾಳಜಿಗೆ ತೀವ್ರ ಸಂತೋಷ ವ್ಯಕ್ತಪಡಿಸಿದ್ದರು.
ಕೇವಲ 21 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 60 ರನ್ಗಳಿಸಿದ್ದ ಪಾಂಡ್ಯ ಪಂದ್ಯದ ನಂತರ ತಾವೂ ಬ್ಲಾಕ್ ಲೈವ್ಸ್ ಮ್ಯಾಟರ್ಗೆ ಬೆಂಬಲ ಸೂಚಿಸಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಪಾಂಡ್ಯ ಅಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದುರದೃಷ್ಟವಶಾತ್ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತು. ಮುಂಬೈ ನೀಡಿದ 196 ರನ್ಗಳ ಗುರಿಯನ್ನು ರಾಜಸ್ಥಾನ್ ತಂಡ ಇನ್ನು 10 ಎಸೆತಗಳು ಉಳಿದಿರುವಂತೆ ಗೆದ್ದು ಬೀಗಿತು. ಬೆನ್ ಸ್ಟೋಕ್ಸ್ ಆಕರ್ಷಕ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.