ಬೆಂಗಳೂರು:ಬೆನ್ನು ನೋವಿನ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ನಂತರ ಭಾರತ ತಂಡದಿಂದ ಹೊರಗುಳಿದಿದ್ದ ಹಾರ್ದಿಕ್, ಶಸ್ತ್ರಚಿಕಿತ್ಸೆ ಮುಗಿಸಿ ಫಿಟ್ ಆಗಿದ್ದು, ನಾಳೆಯಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ(ಏನ್ಸಿಎ) ಪುನಶ್ಚೇತನ ಕ್ರಮಕ್ಕೆ ಒಳಪಡಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ಸಮಯದಲ್ಲಿ ಆಟಗಾರರೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಟೀಂ ಇಂಡಿಯಾ ಮ್ಯಾನೇಜ್ಮೆಂಟ್, ಎನ್ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ತಿಳಿಸಿತ್ತು.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ನ ಸದಸ್ಯರೊಬ್ಬರು, 'ಹಾರ್ದಿಕ್ ಪಾಂಡ್ಯ, ಟೀಂ ಇಂಡಿಯಾ ಆಟಗಾರರೊಂದಿಗೆ ತರಬೇತಿ ಪಡೆಯಲು ಬಂದಾಗ ಮಂಗಳವಾರದಿಂದ ಎನ್ಸಿಎನಲ್ಲಿ ಪುನಶ್ಚೇತನ ಕ್ರಮಕ್ಕೆ ಒಳಪಡುವಂತೆ ಹೇಳಲಾಗಿತ್ತು. ಸುಮಾರು 2 ವಾರಗಳ ಪುನಶ್ಚೇತನಾ ಕ್ರಮ ಮುಗಿದ ನಂತರ ಅಂತಾರಾಷ್ಟ್ರೀಯ ಪಂದ್ಯಗಳನ್ನ ಆಡಲು ಪಾಂಡ್ಯ ಫಿಟ್ ಆಗಲಿದ್ದಾರೆ' ಎಂದು ತಿಳಿಸಿದ್ದಾರೆ.
ಗಾಯಗೊಂಡಿದ್ದ ಪಾಂಡ್ಯ ಮತ್ತು ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟ್ರೈನರ್ ರಜನಿಕಾಂತ್ ಶಿವಜ್ಞಾನಂ ಅವರ ಮೊರೆಹೋಗಿ ಚೇತರಿಕೆ ಕಂಡಿದ್ದರು, ಆದರೂ ಎನ್ಸಿಎ ಅಡಿಯಲ್ಲಿ ಪುಶ್ಚೇತನಾ ಕ್ರಮಕ್ಕೆ ಒಳಪಡುವಂತೆ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ತಿಳಿಸಿದ್ದರು.
ಈ ಬಗ್ಗೆ ಮಾತನಾಡಿರುವ ಗಂಗೂಲಿ, ನಾನು ನಿನ್ನೆಯಷ್ಟೆ ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಮಾತನಾಡಿದ್ದೇನೆ. ಬೌಲರ್ಗಳು ಎನ್ಸಿಎಗೆ ತೆರಳಬೇಕು, ಅಲ್ಲಿರುವವರು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.