ಮುಂಬೈ:ಬೆನ್ನುನೋವಿನ ಕಾರಣ ಅನಧಿಕೃತ ಅವಧಿಗೆ ಭಾರತ ತಂಡದಿಂದ ಹೊರಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಬೆನ್ನಿನ ಸರ್ಜರಿ ಯಶಸ್ವಿಯಾಗಿದೆ.
ಶನಿವಾರ ಹಾರ್ದಿಕ್ ಪಾಂಡ್ಯ ಟ್ವಿಟರ್ನಲ್ಲಿ ತಮ್ಮ " ಶಸ್ತ್ರಚಿಕಿತ್ಸೆ(ಲೋಯರ್ ಬ್ಯಾಕ್) ಯಶಸ್ವಿಯಾಗಿದ್ದು, ಈ ಸಮಯದಲ್ಲಿ ನನಗೆ ಶುಭಕೋರಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ. ಆದಷ್ಟು ಬೇಗ ಬರಲಿದ್ದೇನೆ, ಅಲ್ಲಿಯವರೆಗೆ ನನ್ನನ್ನು ಮಿಸ್ ಮಾಡಿ" ಎಂದು ಬರೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಂದು ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಪಾಂಡ್ಯರಿಗೆ 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಮೊದಲ ಬಾರಿಗೆ ಬೆನ್ನು ನೋವಿನ ಸಮಸ್ಯೆ ಎದುರಾಗಿತ್ತು. ಚೇತರಿಸಿಕೊಂಡಿದ್ದ ಅವರು ಐಪಿಎಲ್, ವಿಶ್ವಕಪ್ ಟೂರ್ನಿಯಲ್ಲಿ ಆಡಿದ ನಂತರ ಎರಡು ತಿಂಗಳ ವಿಶ್ರಾಂತಿ ಪಡೆಯುವ ಮೂಲಕ ವೆಸ್ಟ್ ಇಂಡೀಸ್ ಸರಣಿಯಿಂದ ಹೊರಗುಳಿದಿದ್ದರು.
ದ. ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ದರು. ಆದರೆ, ಹಾರ್ದಿಕ್ಗೆ ಮತ್ತೆ ಬೆನ್ನು ನೋವಿನ ಸಮಸ್ಯೆ ಕಾಡಿದ್ದರಿಂದ ಲಂಡನ್ಗೆ ತೆರಳಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇವರು ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಇವರ ಜೊತೆಗೆ ಭಾರತದ ವೇಗಿ ಬುಮ್ರಾ ಕೂಡಾ ಬೆನ್ನುನೋವಿಗೆ ತುತ್ತಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಕೂಡ ಬಾಂಗ್ಲಾದೇಶದ ಸರಣಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.