ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ ವಿರುದ್ಧ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಪಿಒಕೆಗೆ ಭೇಟಿ ನೀಡಿದ್ದ ಶಾಹೀದ್ ಅಫ್ರಿದಿ ತಾವು ತಮ್ಮ ಕೊನೆಯ ಪಿಎಸ್ಎಲ್ ಲೀಗ್ನಲ್ಲಿ ಕಾಶ್ಮೀರಿ ತಂಡದೊಂದಿಗೆ ಆಡುವುದಾಗಿ ಹೇಳಿದ್ದರಲ್ಲದೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಧಾರ್ಮಿಕ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕಳೆದ ತಿಂಗಳು ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕೊರೊನಾ ವಿರುದ್ಧ ಹೋರಾಡುತ್ತಿರುವ ಶಾಹೀದ್ ಅಫ್ರಿದಿ ಫೌಂಡೇಶನ್ಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಭಾರತೀಯರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಅಫ್ರಿದಿ ಮನವಿ ಮೇರೆಗೆ ನಾನು ಮತ್ತು ಯುವಿ ವಿಡಿಯೋ ಮಾಡಿ ಅಫ್ರಿದಿ ಫೌಂಡೇಶನ್ಗೆ ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ನೆರವಾಗಲು ಕೋರಿಕೊಂಡಿದ್ದೆವು. ಏಕೆಂದರೆ ವೈರಸ್ ಯಾವುದೇ ಧರ್ಮ ಅಥವಾ ಗಡಿ ನೋಡಿ ಬರುವುದಿಲ್ಲ ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಅವರು ಭಾರತ ವಿರೋಧಿ ಹೇಳಿಕೆ ನೀಡಿರುವುದರಿಂದ ಅವರಿಗೂ ನಮಗೂ ಇನ್ನು ಯಾವುದೇ ರೀತಿಯ ಸ್ನೇಹ ಸಂಬಂಧವಿರುವುದಿಲ್ಲ ಎಂದು ಭಜ್ಜಿ ಅಫ್ರಿದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಆತ ನನ್ನ ಸ್ನೇಹಿತ ಎಂದು ನಾನು ಭಾವಿಸಿದ್ದಕ್ಕೆ ನನಗೆ ಬೇಸರವಾಗುತ್ತಿದೆ. ಆತ ನನ್ನ ಸ್ನೇಹಿತ ಎಂದು ಹೇಳಿಕೊಳ್ಳುವಂತ ಯೋಗ್ಯ ಮನುಷ್ಯನಲ್ಲ. ಇನ್ಮುಂದೆ ಆತನೊಂದಿಗಿನ ಸ್ನೇಹ ಸಂಬಂಧ ಅಂತ್ಯಗೊಂಡಿದೆ ಎಂದು ಭಜ್ಜಿ ಕಿಡಿಕಾರಿದ್ದಾರೆ.
ಇನ್ನು ಯುವಿ ಕೂಡ ಅಫ್ರಿದಿ ಹೇಳಿಕೆಯನ್ನು ಖಂಡಿಸಿದ್ದಾರೆ. ನಮ್ಮ ಪ್ರಧಾನಮಂತ್ರಿ ವಿರುದ್ಧ ಶಾಹೀದ್ ಅಫ್ರಿದಿ ಹೇಳಿಕೆ ನನಗೆ ನಿಜಕ್ಕೂ ಬೇಸರ ತಂದಿದೆ. ನಾನೊಬ್ಬ ಜವಾಬ್ದಾರಿಯುವ ನಾಗರಿಕನಾಗಿ ಹಾಗೂ ದೇಶಕ್ಕಾಗಿ ಆಡಿರುವ ನಾವು ಇಂತಹ ಬೇಜಾವಬ್ದಾರಿ ಹೇಳಿಕೆಯನ್ನು ಎಂದಿಗೂ ಸ್ವೀಕರಿಸುವುದಿಲ್ಲ. ನಾವು ಮಾನವೀಯತೆಯ ದೃಷ್ಟಿಯಿಂದ ನಿಮಗಾಗಿ ಮನವಿ ಮಾಡಿದ್ದೆವು. ಇನ್ನು ಮುಂದೆ ಹಾಗೆ ಮಾಡುವುದಿಲ್ಲ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.