ಹೈದರಾಬಾದ್: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಗಂಗೂಲಿ 2000 ದಿಂದ 2004ರವರೆಗೆ ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಅವರನ್ನು ಭಾರತದ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಗಂಗೂಲಿ ಅವರ ಕ್ರಿಕೆಟ್ ಜೀವನದ ಪ್ರಾರಂಭದಿಂದ, ಬಿಸಿಸಿಐ ಅಧ್ಯಕ್ಷರಾಗುವವರೆಗಿನ ಸಂಪೂರ್ಣ ಜೀವನಕಥೆ ಇಲ್ಲಿದೆ.
ಹಿರಿಯ ಸಹೋದರನಿಂದ ಕ್ರಿಕೆಟ್ ಆಡಲು ಪ್ರೇರಣೆ:
ಸೌರವ್ ಅವರ ಹಿರಿಯ ಸಹೋದರ ಸ್ನೇಹಶಿಶ್ ಬಾಲ್ಯದಿಂದಲೂ ಕ್ರಿಕೆಟ್ ಆಡಲು ಬಯಸಿದ್ದರು. ಸೌರವ್ ತಮ್ಮ ಹಿರಿಯ ಸಹೋದರನ ರೀತಿಯಲ್ಲಿ ತಾವೂ ಕೂಡಾ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಬಾಲ್ಯದಲ್ಲಿ ದಾದಾ ಶಾಲಾ ತಂಡದಲ್ಲಿ ಆಯ್ಕೆಯಾದರು. ಬಳಿಕ ರಾಜ್ಯ ತಂಡಕ್ಕಾಗಿಯೂ ಆಡಿದರು. ಭಾರತೀಯ ತಂಡಕ್ಕಾಗಿ ಆಡುವ ಮನಸ್ಸು ಮಾಡಿದ ದಾದಾ 1992ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣ ಮಾಡಿದರು.
ಮೊದಲ ಬಾರಿಗೆ ಭಾರತೀಯ ತಂಡದ ಜರ್ಸಿ ಧರಿಸುವ ಅವಕಾಶ:
1992ರಲ್ಲಿ ಗಂಗೂಲಿಗೆ ಮೊದಲ ಬಾರಿಗೆ ಭಾರತೀಯ ತಂಡದ ಜರ್ಸಿ ಧರಿಸುವ ಅವಕಾಶ ಸಿಕ್ಕಿತು. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಆಯ್ಕೆಯಾಗಿದ್ದರು. ಈ ಸರಣಿಯಲ್ಲಿ ಅವರಿಗೆ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿತ್ತು, ಆದರೆ, ಪಂದ್ಯದಲ್ಲಿ ಅವರು ಕೇವಲ ಮೂರು ರನ್ ಗಳಿಸಲು ಸಾಧ್ಯವಾಯಿತು. ಈ ಕಾರಣದಿಂದಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು.
ತಂಡಕ್ಕೆ ಮರಳಿದ ದಾದಾ:
ಭಾರತ ತಂಡದಲ್ಲಿ ಮತ್ತೆ ಆಡಲು ದಾದಾ ನಾಲ್ಕು ವರ್ಷ ಕಾಯಬೇಕಾಯಿತು. ನಾಲ್ಕು ವರ್ಷಗಳ ಕಾಲ ಸತತ ಪ್ರಯತ್ನದ ಬಳಿಕ, 1996ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಚೊಚ್ಚಲ ಪಂದ್ಯವನ್ನಾಡಿ, ತಮ್ಮ ಮೊದಲ ಎರಡು ಟೆಸ್ಟ್‌ಗಳಲ್ಲಿ ಎರಡು ಶತಕಗಳನ್ನು ಗಳಿಸಿದರು.
ಏಕದಿನ ನಾಯಕತ್ವಕ್ಕೆ ಮರಳಿದ ಸಚಿನ್:
ನಾಲ್ಕು ವರ್ಷಗಳ ಕಾಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದ ಗಂಗೂಲಿಗೆ 1996ರಲ್ಲಿ ಟೈಟಾನ್ ಕಪ್ ಸಮಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂದಿನ ನಾಯಕ ಸಚಿನ್ ತೆಂಡೂಲ್ಕರ್ ಅವಕಾಶ ನೀಡಿದರು. ಪಂದ್ಯದಲ್ಲಿ ಸಚಿನ್ ಅವರೊಂದಿಗೆ ಓಪನಿಂಗ್ ಮಾಡಿದ ಗಂಗೂಲಿ 54 ರನ್ ಗಳಿಸಿದರು. ಸಚಿನ್ ಮತ್ತು ಗಂಗೂಲಿ ಜೋಡಿ ವಿಶ್ವದ ಅತ್ಯುತ್ತಮ ಆರಂಭಿಕ ಜೋಡಿಗಳಲ್ಲೊಂದು ಎಂಬುದು ಗಮನಾರ್ಹ
ಜಗಮೋಹನ್ ದಾಲ್ಮಿಯಾಗೆ ಹತ್ತಿರವಾಗಿದ್ದ ಗಂಗೂಲಿ:
ಜಗಮೋಹನ್ ದಾಲ್ಮಿಯಾ ಅವರ ಕಾರಣದಂದಲೇ ಸೌರವ್ ಗಂಗೂಲಿ ಕ್ರಿಕೆಟ್‌ಗೆ ಮರಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಆಗ ದಾಲ್ಮಿಯಾ ಬಿಸಿಸಿಐ ಕಾರ್ಯದರ್ಶಿಯಾಗಿದ್ದರು.