ಪುಣೆ: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕನ್ನಡಿಗ ಮನೀಷ್ ಪಾಂಡೆ ಭಾರತ ತಂಡಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಕೊನೇಯ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ ಮನೀಷ್ 18 ಎಸೆತಗಳಲ್ಲಿ 31 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾಗಿದ್ದರು. ನಂತರ ಫೀಲ್ಡಿಂಗ್ನಲ್ಲಿ ಕಮಾಲ್ ಮಾಡಿದ ಅವರು ಒಂದು ರನ್ಔಟ್ ಹಾಗೂ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದ ಮ್ಯಾಥ್ಯೂಸ್ ಕ್ಯಾಚ್ ಪಡೆದು ಅಮೋಘ ಪ್ರದರ್ಶನ ನೀಡಿದ್ರು.
'ದೀರ್ಘ ಸಮಯದ ನಂತರ ಭಾರತ ತಂಡದ ಪರ ಆಡಲು ಅವಕಾಶ ಪಡೆದೆ. ತರಬೇತಿ ವೇಳೆ ಅವಕಾಶಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾತನಾಡುತ್ತಿದ್ದೆ. ಇದೀಗ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ತುಂಬ ಸಮಯದ ನಂತರ ಆಡಿದ್ದು ಸಂತೋಷ ತಂದಿದೆ, ಅದರಲ್ಲೂ ಗೆಲುವಿನಲ್ಲಿ ಕೈಜೋಡಿಸಿರುವುದಕ್ಕೆ ಇನ್ನೂ ಖುಷಿಯಾಗಿದೆ' ಎಂದು ಚಹಾಲ್ ನಡೆಸಿಕೊಡುವ ಚಹಾಲ್ ಟಿವಿ ಸಂದರ್ಶನದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಎರಡಕ್ಕೂ ನಾನು ತುಂಬಾ ಮಹತ್ವ ನೀಡುತ್ತೇನೆ. ಕೆಲವು ಸಂದರ್ಭದಲ್ಲಿ ಕ್ಯಾಚ್ ಹಾಗೂ ರನ್ಔಟ್ಗಳು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಮನೀಷ್ ಹೇಳಿದ್ದಾರೆ.
ಪಂದ್ಯದಲ್ಲಿ ಚಹಾಲ್ ಕೂಡ ಅದ್ಭುತವಾಗಿ ರನ್ಔಟ್ ಮಾಡಿದ್ದರು. ಉತ್ತಮವಾಗಿ ರನೌಟ್ ಮಾಡಿದ್ರಿ, ಆದರೆ ಏಕೆ ಕೆಳಗೆ ಬಿದ್ದಿರೆಂದು ಮನೀಶ್ ಕೇಳಿದ್ದಕ್ಕೆ ಉತ್ತರಿಸಿದ ಚಹಾಲ್, ನಾನು ಅಷ್ಟೊಂದು ಸ್ಟ್ರಾಂಗ್ ಇದ್ದೇನೆ ಅದಕ್ಕೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಅಲ್ಲದೆ ಇದು 2016ರ ನಂತರ ಮಾಡಿದ ರನ್ಔಟ್ ಎಂದಿದ್ದಾರೆ.