ನವದೆಹಲಿ:ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ 39ನೇ ವಸಂತಕ್ಕೆ ಕಾಲಿಟ್ಟಿದ್ದು, ಭಾರತಕ್ಕೆ ಟಿ-20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಕ್ಸರ್ ಕಿಂಗ್ಗೆ ಹಲವು ತಾರೆಗಳು ಶುಭಾಶಯ ಕೋರುತ್ತಿದ್ದಾರೆ.
ಮೈದಾನದಲ್ಲಿ ಅತ್ಯಂತ ಚುರುಕಿನ ಫೀಲ್ಡಿಂಗ್, ಬ್ಯಾಟ್ ಹಿಡಿದು ಬಂದರೆ ಸಿಕ್ಸರ್ ಮೇಲೆ ಸಿಕ್ಸರ್, ಪಾರ್ಟ್ ಟೈಂ ಬೌಲರ್ ಆಗಿಯೂ ವಿಕೆಟ್ ಕೀಳುವ ಚಾಕಚಕ್ಯತೆ ಹೊಂದಿದ್ದ ಯುವಿ... ಈ ಆಲ್ರೌಂಡರ್ ಹೆಸರು ಯುವರಾಜ್ ಸಿಂಗ್ ಟೀಂ ಇಂಡಿಯಾ ಪಾಲಿಗೆ ದೊರೆತ ಪರಿಪೂರ್ಣ ಹಾಗೂ ಪರಿಪಕ್ವ ಆಲ್ರೌಂಡರ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಭಾರತ ತಂಡದ ಪರ 304 ಏಕದಿನ ಪಂದ್ಯಗಳಿಂದ 8,701 ರನ್, 40 ಟೆಸ್ಟ್ ಪಂದ್ಯಗಳಿಂದ 1,900 ಮತ್ತು 58 ಟಿ-20 ಪಂದ್ಯಗಳಿಂದ 1,177 ರನ್ ಗಳಿಸಿದ್ದಾರೆ.
ಯುವರಾಜ್ ಸಿಂಗ್ ತಮ್ಮ ವೃತ್ತಿಜೀವನದಲ್ಲಿ 7 ಐಸಿಸಿ ಫೈನಲ್ಸ್ ಆಡಿದ್ದಾರೆ. 2000 ಮತ್ತು 2002 ಚಾಂಪಿಯನ್ಸ್ ಟ್ರೋಫಿ, 2003 ವಿಶ್ವಕಪ್, 2007ರ ಟಿ-20 ವಿಶ್ವಕಪ್, 2011ರ ವಿಶ್ವಕಪ್, 2014ರ ಟಿ-20 ವಿಶ್ವಕಪ್ ಮತ್ತು 2017 ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪಂದ್ಯಗಳಲ್ಲಿ ಆಡಿದ್ದಾರೆ. ಈ ಮೂಲಕ ಅತೀ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಆಡಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಮಹಾಮಾರಿ ಕ್ಯಾನ್ಸರ್ ಹಿಮ್ಮೆಟ್ಟಿಸಿ ಮರು ಹುಟ್ಟು ಪಡೆದ ಯುವಿ ಮೈದಾನದಲ್ಲಿ ಕೊಂಚ ಮಂಕಾಗಿದ್ದರು. 2019ರ ಜೂನ್ 10 ರಂದು ಎಲ್ಲ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯುವರಾಜ್ ಸಿಂಗ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರರಾದ ಹರ್ಭಜನ್ ಸಿಂಗ್, ವಿವಿಎಸ್ ಲಕ್ಷ್ಮಣ್ ಮತ್ತು ಸುರೈಶ್ ರೈನಾ ಸೇರಿದಂತೆ ಹಲವು ಆಟಗಾರರು ಶುಭಾಶಯ ತಿಳಿಸಿದ್ದಾರೆ.