ಮುಂಬೈ:ಭಾರತ ಕ್ರಿಕೆಟ್ ತಂಡದ ಲೆಜೆಂಡ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ಇಂದು 47ನೇ ವಸಂತಕ್ಕೆ ಕಾಲಿರಿಸಿದ್ದು, ಜಾಲತಾಣದಲ್ಲಿ ಶುಭಾಶಗಳ ಮಹಾಪೂರವೆ ಹರಿದುಬರುತ್ತಿದೆ.
2013ರ ನವೆಂಬರ್ 16 ರಂದು ವಾಂಖೆಡೆ ಮೈದಾನದಲ್ಲಿ ಕಡೇಯ ಪಂದ್ಯವನ್ನಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಭಾವನಾತ್ಮಕ ವಿದಾಯ ಘೋಷಿಸಿದ್ದ ಸಚಿನ್ ಈಗಲೂ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ದಂತಕಥೆ ಎಂದೇ ಕರೆಯುವ ಸಚಿನ್, ಹಲವಾರು ದಾಖಲೆಗಳನ್ನು ಸೃಷ್ಟಿಮಾಡಿದ್ದು, ಮುಂದಿನ ದಿನಗಳಲ್ಲೂ ಆ ದಾಖಲೆಗಳನ್ನು ಬ್ರೇಕ್ ಮಾಡುವುದು ಕಷ್ಟವಾಗಿದೆ.
ಜನ್ಮದಿನದ ಸಂಭ್ರಮದಲ್ಲಿರುವ ಸಚಿನ್ ತೆಂಡೂಲ್ಕರ್ಗೆ ಮಾಜಿ ಮತ್ತು ಹಾಲಿ ಭಾರತೀಯ ಕ್ರಿಕೆಟಿಗರು ಸೇರಿದಂತೆ ಹಲವಾರು ವಿದೇಶಿ ಆಟಗಾರರು, ಸಿನಿ ತಾರೆಯರು ಕೂಡ ಶುಭಕೋರಿ ಹಾರೈಸಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸಚಿನ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಏಕದಿನ ಪಂದ್ಯಗಳ್ಲಿ 18,426 ರನ್ ಗಳಿಸಿದ್ರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ.
100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ಮತ್ತು ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರನಾಗಿದ್ದಾರೆ. ಕ್ರೀಡಾ ವಿಭಾಗದಲ್ಲಿ ಸಚಿನ್ ಅವರ ಸಾಧನೆಗಾಗಿ 2014 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಭಾರತ ರತ್ನ ನೀಡಿ ಗೌರವಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಅತ್ಯಂತ ಕಿರಿಯ ವ್ಯಕ್ತಿ ಮತ್ತು ಮೊದಲ ಕ್ರೀಡಾಪಟುವಾಗಿದ್ದಾರೆ.