ಹ್ಯಾಮಿಲ್ಟನ್: ಕನ್ನಡಿಗ ಮಯಾಂಕ್ ಅಗರ್ವಾಲ್ ಭಾನುವಾರ 29 ವಸಂತಕ್ಕೆ ಕಾಲಿರಿಸಿದ್ದು, ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಸ್ಟೇಡಿಯಂನಲ್ಲೇ ಅವರ ಹುಟ್ದಬ್ಬ ಆಚರಿಸಿದರು.
ಫೆಬ್ರವರಿ 16, 1991 ರಲ್ಲಿ ಬೆಂಗಳೂರಿನಲ್ಲಿ ಜನಸಿದ ಮಯಾಂಕ್ ಅಗರ್ವಾಲ್ ಹ್ಯಾಮಿಲ್ಟನ್ ಕ್ರಿಕೆಟ್ ಮೈದಾನದಲ್ಲಿ ಇಂದು ತಮ್ಮ 29 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ನ್ಯೂಜಿಲ್ಯಾಂಡ್ ಇಲೆವೆನ್ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಅವರು ಟೆಸ್ಟ್ ಸರಣಿಗೂ ಮುನ್ನ ತಮ್ಮ ಎಂದಿನ ಫಾರ್ಮ್ಗೆ ಮರಳಿರುವುದು ಖುಷಿಯ ವಿಚಾರವಾಗಿದೆ.
2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅಗರ್ವಾಲ್ 9 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 872 ರನ್ಗಳಿಸಿದ್ದಾರೆ. ಇದರಲ್ಲಿ 2 ದ್ವಿಶತಕ ಸೇರಿದಂತೆ 3 ಶತಕ ಹಾಗೂ 3 ಅರ್ಧಶತಕಗಳು ಸೇರಿವೆ. ಇದೇ ವರ್ಷ ಕಿವೀಸ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಅಗರ್ವಾಲ್ ಆಡಿದ ಮೂರು ಪಂದ್ಯಗಳಲ್ಲೂ ವೈಫಲ್ಯ ಅನುಭವಿಸಿದ್ದರು.
ಮಯಾಂಕ್ ಕರ್ನಾಟಕ ಪರ 62 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 11 ಶತಕಗಳ ಸಹಿತ 4849 ರನ್ ಪೇರಿಸಿದ್ದಾರೆ. 85 ಲಿಸ್ಟ್ ಎ ಪಂದ್ಯಗಳಿಂದ 13 ಶತಕಗಳ ಸಹಿತ 4031 ರನ್ಗಳಿಸಿದ್ದಾರೆ.
ಮಯಾಂಕ್ ಅಗರ್ವಾಲ್ರ ಸ್ಮರಣೀಯ ಇನ್ನಿಂಗ್ಸ್ಗಳು:
ಪದಾರ್ಪಣೆ ಪಂದ್ಯದಲ್ಲೇ 76 ರನ್ (2018)
ಮಯಾಂಕ್ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 76 ರನ್ಗಳಿಸಿದ್ದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎನ್ನಿಸಿಕೊಂಡಿದ್ದಲ್ಲದೆ 76 ವರ್ಷಗಳ ದಾಖಲೆ ಮುರಿದಿದ್ದರು.