ನವದೆಹಲಿ: ಭಾರತ ತಂಡಕ್ಕೆ ಎರಡು ವಿಶ್ವಕಪ್ ತಂದು ಕೊಡುವಲ್ಲಿ ಶ್ರಮಿಸಿರುವ ಆಟಗಾರರಲ್ಲಿ ಒಬ್ಬರಾದ ದೆಹಲಿಯ ಮಾಜಿ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಇಂದು 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಗೌತಮ್ ಗಂಭೀರ್ಗೆ ಸಹ ಆಟಗಾರರಾಗಿದ್ದ ಸುರೇಶ್ ರೈನಾ, ಚೇತೇಶ್ವರ್ ಪೂಜಾರ, ವಿವಿಎಸ್ ಲಕ್ಷ್ಮಣ್, ಆರ್ ಪಿ ಸಿಂಗ್ ಹಾಗೂ ಐಸಿಸಿ ಹಾಗೂ ಬಿಸಿಸಿಐ ಸೇರಿದಂತೆ ಹಲವು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.
ಗಂಭೀರ್ ಕುರಿತ ಕೆಲವು ಕುತೂಹಲಕಾರಿ ಸಂಗತಿಗಳು
ಗೌತಮ್ ಗಂಭೀರ್ ಭಾರತ ಕ್ರಿಕೆಟ್ನಲ್ಲಿ ಎಂದಿಗೂ ಮರೆಯಲಾಗದ ಹೆಸರು. ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011 ರ ವಿಶ್ವಕಪ್ ಫೈನಲ್ನಲ್ಲಿ ದಿಗ್ಗಜ ಬ್ಯಾಟ್ಸ್ಮನ್ಗಳ ವಿಫಲತೆಯ ನಡುವೆಯೂ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಕಷ್ಟಪಟ್ಟು ಕ್ರಿಕೆಟ್ನಲ್ಲಿ ಬೆಳೆಯುತ್ತಿರುವ ಪ್ರತಿಭೆಗಳ ಬೆಂಬಲಕ್ಕೆ ಸದಾ ನಿಲ್ಲುವ ಗಂಭೀರ್, ಅವರಿಗೆ ಅನ್ಯಾಯವಾದರೆ ಅವರ ಪರವಾಗಿ ಹೋರಾಟಕ್ಕೆ ಮೊದಲು ತಾವು ಸಿದ್ಧವಾಗುತ್ತಾರೆ. ಇವರ ಹೋರಾಟದ ಫಲದಿಂದಲೇ ನವ್ದೀಪ್ ಸೈನಿ ಎಂಬ ಪ್ರತಿಭೆ ಭಾರತ ತಂಡಕ್ಕೆ ಆಯ್ಕೆಯಾಗಲು ಕಾರಣವಾಗಿದ್ದಾರೆ.
ಭಾರತವನ್ನು ಕೆಣಕುವ ಪಾಕಿಸ್ತಾನದ ವಿರುದ್ಧ ಸದಾ ಕಿಡಿಕಾರುವ ಗೌತಿ, ಟ್ವಿಟ್ಟರ್ನಲ್ಲಿ ಭಾರತದ ವಿರುದ್ಧ ಟ್ವೀಟ್ ಮಾಡುವವರಿಗೆ ಬಿಸಿ ಮುಟ್ಟಿಸುತ್ತಿರುತ್ತಾರೆ. ಅದರಲ್ಲೂ ಶಾಹೀದ್ ಅಫ್ರಿದಿ ವಿರುದ್ಧವಂತೂ ಟ್ವೀಟ್ವಾರ್ ನಡೆಯುತ್ತಲೇ ಇರುತ್ತದೆ. ಈ ಹೋರಾಟದ ಮನೋಭಾವನೆ ಇದ್ದುದರಿಂದಲೇ ಚೊಚ್ಚಲ ಚುನಾವಣೆಯಲ್ಲೇ ಲಕ್ಷಕ್ಕೂ ಹೆಚ್ಚು ಮತಗಳ ಜಯ ಸಾಧಿಸಿ ಸಂಸತ್ ಸದಸ್ಯರಾಗಿದ್ದಾರೆ.
ಗಂಭೀರ್ ಭಾರತದ ಪರ 147 ಏಕದಿನ ಪಂದ್ಯಗಳಾಡಿದ್ದು, 5238 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ ಸೇರಿದೆ. 58 ಟೆಸ್ಟ್ ಪಂದ್ಯಗಳಲ್ಲಿ 9 ಶತಕದ ನೆರವಿನಿಂದ 4154 ರನ್, 37 ಟಿ20 ಪಂದ್ಯಗಳಿಂದ 932 ರನ್ ಗಳಿಸಿದ್ದಾರೆ. ಇವರು 2007 ರ ವಿಶ್ವಕಪ್ ಹಾಗೂ 2011 ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. 2009 ರಲ್ಲಿ ಐಸಿಸಿಯ ವರ್ಷದ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.