ಮುಂಬೈ: ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಗಂಗೂಲಿ ಇಂದು 48ನೇ ವಸಂತಕ್ಕೆ ಕಾಲಿಡುತ್ತಿದ್ದು, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಭಾರತದಲ್ಲಿ ಕ್ರಿಕೆಟ್ ಆಟವನ್ನು ಬದಲಾಯಿಸಿದ ದಾದಾರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಮ್ಯಾಚ್ ಫಿಕ್ಸಿಂಗ್ನಿಂದ ಭಾರತದಲ್ಲಿ ಕ್ರಿಕೆಟ್ ಅಧೋಗತಿಗೆ ತಲುಪಿತ್ತು. ಜನರು ಕ್ರಿಕೆಟ್ ಎಂದರೆ ಮೂಗು ಮುರಿಯುವ ಕಾಲ, ಕ್ರಿಕೆಟ್ ದೇವರೆಂದೇ ಖ್ಯಾತರಾಗಿದ್ದ ಸಚಿನ್ಗೆ ನಾಯಕತ್ವ ಕಬ್ಬಿಣದ ಕಡಲೆಯಾಗಿತ್ತು. ಇತ್ತ ದಿಕ್ಕುದೆಸೆಯಿಲ್ಲದೇ ಸಾಗುತ್ತಿದ್ದ ಭಾರತೀಯ ಕ್ರಿಕೆಟ್ನ ಚುಕ್ಕಾಣಿ ಹಿಡಿದ ಬಂಗಾಳದ ಹುಲಿ, ಪ್ರೇಕ್ಷಕರನ್ನ ಮತ್ತೆ ಮೈದಾನಕ್ಕೆ ಕರೆತಂದರು. ಇಡೀ ತಂಡದಲ್ಲಿ ಇಂದು ಲೆಜೆಂಡ್ ಎನಿಸಿಕೊಳ್ಳುತ್ತಿರುವ ಹಲವಾರು ಕ್ರಿಕೆಟಿಗರನ್ನು ತಂಡಕ್ಕೆ ಕರೆ ತಂದರು. ನಂತರ ಅಲ್ಲಿಂದ ನಡೆದಿದ್ದೆಲ್ಲ ಇತಿಹಾಸವೇ ಸರಿ.
ದೇಶದಲ್ಲೇ ಸರಣಿ ಗೆಲ್ಲುವುದಕ್ಕೆ ಹೆಣಗಾಡುತ್ತಿದ್ದ ಭಾರತ ತಂಡ ವಿದೇಶದಲ್ಲಿ ಹುಲಿಯಂತೆ ಘರ್ಜಿಸತೊಡಗಿತ್ತು. ಆಸ್ಟ್ರೇಲಿಯಾದಂತಹ ದೈತ್ಯ ಕ್ರಿಕೆಟ್ ತಂಡವನ್ನು ಬಗ್ಗುಬಡಿದಿತ್ತು. ಇಂಗ್ಲೆಂಡ್ ತಂಡವನ್ನು ಇಂಗ್ಲೆಂಡ್ ನೆಲದಲ್ಲಿ ಮಣಿಸಿ ನಾಟ್ವೆಸ್ಟ್ ಸರಣಿ ಎತ್ತಿಹಿಡಿದಿತ್ತು. ಇದಲ್ಲದೇ 2003 ರ ವಿಶ್ವಕಪ್ನಲ್ಲಿ ವೀರಾವೇಶದಿಂದ ಹೋರಾಡಿದ್ದ ಗಂಗೂಲಿ ಭಾರತಕ್ಕೆ ಪ್ರಶಸ್ತಿ ತಂದುಕೊಡುವುದರಲ್ಲಿ ವಿಫಲರಾದರೂ ಅವರ ನಾಯಕತ್ವದ ಭಾರತ ತಂಡ 20 ವರ್ಷಗಳ ನಂತರ ಫೈನಲ್ಗೇರುವಲ್ಲಿ ಯಶಸ್ವಿಯಾಗಿತ್ತು.
ಭಾರತ ತಂಡಕ್ಕೆ ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಮಹೇಂದ್ರ ಸಿಂಗ್ ಧೋನಿ, ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್ ಅವರಂತಹ ಆಟಗಾರರನ್ನು ಆಯ್ಕೆ ಮಾಡಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು ದಾದಾ. ಅದೇ ದಾದಾ ಇಂದು ಬಿಸಿಸಿಐ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದು, ಕ್ರಿಕೆಟ್ ಮಂಡಳಿಯನ್ನು ಬೆಳೆಸುವ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಬೆಂಗಾಲ್ ಮಹಾರಾಜ್ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಭಾರತದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.