ನವದೆಹಲಿ:ತನ್ನ 360 ಡಿಗ್ರಿ ಬ್ಯಾಟಿಂಗ್ ಹಾಗೂ ಮೈದಾನದಲ್ಲಿ ಅಜಾತ ಶತ್ರುವಾಗಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಮನಸ್ಸು ಕದ್ದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕ್ರಿಕೆಟ್ ಕಂಡ ವಿಧ್ವಂಸಕ ಬ್ಯಾಟ್ಸ್ಮನ್, ಅದ್ಭುತ ಫೀಲ್ಡರ್ ಹಾಗೂ ಚಾಣಕ್ಯ ವಿಕೆಟ್ ಕೀಪರ್ ಆಗಿರುವ ಎಬಿಡಿ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಅವರು 8765 ಟೆಸ್ಟ್ ರನ್, ಏಕದಿನ ಕ್ರಿಕೆಟ್ನಲ್ಲಿ 9,577 ರನ್ ಹಾಗೂ ಟಿ-20ಯಲ್ಲಿ 1672 ರನ್ ಸಿಡಿಸಿದ್ದಾರೆ.
ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಅವರು ಏಕದಿನ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ, ಶತಕ ಹಾಗೂ 150 ರನ್ ಸಿಡಿಸಿರುವ ದಾಖಲೆ ಎಬಿಡಿ ಅವರ ಹೆಸರಿನಲ್ಲಿದೆ. 2015 ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಲಿಯರ್ಸ್ ಕೇವಲ 66 ಎಸೆತಗಳಲ್ಲಿ ಅಜೇಯ 162 ರನ್ ಸಿಡಿಸಿದ್ದರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಹಾಗೂ 8 ಸಿಕ್ಸರ್ ಸೇರಿತ್ತು.