ಮುಂಬೈ:ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ಎಂದೇ ಇಂದಿಗೂ ಕರೆಸಿಕೊಳ್ಳುತ್ತಿರುವ ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್ಮನ್ಗೆ 111ನೇ ಜನಮದಿನ. ಅವರು ಇಂದು ಕ್ರಿಕೆಟ್ ಜಗತ್ತಿನಲ್ಲಿಲ್ಲದಿದ್ದರೂ ಅವರ ದಾಖಲೆಗಳೂ, ಕ್ರಿಕೆಟ್ಗೆ ನೀಡಿದ ಕೊಡುಗೆ ಇನ್ನು ಚಿರವಾಗಿದೆ.
ಆಗಸ್ಟ್ 27, 1908 ರಲ್ಲಿ ನ್ಯೂ ಸೌತ್ವೇಲ್ಸ್ನ ಕೂಟಮುಂಡ್ರದಲ್ಲಿ ಜನಿಸಿದ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. 1928 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟ ಬ್ರಾಡ್ಮನ್ 1948 ರಲ್ಲಿ ನಿವೃತ್ತಿ ಹೊಂದಿದ್ದರು. ಈ ವೇಳೆ ಆಸ್ಟ್ರೇಲಿಯಾ ಪರ 52 ಟೆಸ್ಟ್ ಪಂದ್ಯಳನ್ನಾಡಿದ್ದು, ಇದರಲ್ಲಿ 2 ತ್ರಿಶತಕ, 29 ಶತಕ, ಹಾಗೂ 13 ಅರ್ಧಶತಕ ಸಿಡಿಸಿದ್ದಾರೆ. ಇವರ ಹೆಸರಿನಲ್ಲಿ 12 ದ್ವಿಶತಕವೂ ಕೂಡ ಸೇರಿದೆ.
ಬ್ರಾಡ್ಮನ್ ಕ್ರಿಕೆಟ್ ತ್ಯಜಿಸಿ 71 ವರ್ಷವಾದರೂ ಅವರ ಹೆಸರಿನಲ್ಲಿರುವ 5 ದಾಖಲೆಗಳು ಇಂದಿಗೂ ಯಾರಿಂದಲೂ ಬ್ರೇಕ್ ಮಾಡಲಾಗಿಲ್ಲ. ಅವುಗಳ ಇಲ್ಲಿದೆ.
1. ಅತಿ ಹೆಚ್ಚು ದ್ವಿಶತಕ
ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ 29 ಸೆಂಚುರಿ ಸಿಡಿಸಿದ್ದು, ಅದರಲ್ಲಿ (12) ಹನ್ನೆರಡನ್ನು ದ್ವಿಶತಕಗಳಾಗಿ ಪರಿವರ್ತಿಸಿದ್ದಾರೆ. ಈ ದಾಖಲೆ ಇನ್ನು ಅವರ ಹೆಸರಿನಲ್ಲಿಯೇ ಇದೆ. ಇವರನ್ನು ಬಿಟ್ಟರೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಮಾತ್ರ (11) ದ್ವಿಶತಕಗಳಲ್ಲಿ10ರ ಗಡಿದಾಟಿದ 2ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
2. ವೇಗವಾಗಿ 7ನೇ ಶತಕದಿಂದ 29ನೇ ಶತಕ
ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 7ನೇ ಶತಕ ದಾಖಲಿಸಿದ್ದರು. ನಂತರ ಅಲ್ಲಿಂದ ಹಿಂದೆ ತಿರುಗದ ಅವರು, 29ನೇ ಶತಕದ ವರೆಗೂ ಈ ದಾಖಲೆ ಅವರ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದಾರೆ. ಆ ದಾಖಲೆ ಕೂಡ ಯಾರಿಂದಲೂ ಮುರಿಯಲೂ ಸಾಧ್ಯವಾಗಿಲ್ಲ, ಮುಂದೆಯೂ ಸಾಧ್ಯವಾಗುವುದೂ ಇಲ್ಲ ಎನಿಸುತ್ತಿದೆ.
3. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್ಗಳಿಸಿದ ದಾಖಲೆ:
5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬ್ರಾಡ್ಮನ್ 974 ರನ್ಗಳಿಸಿದ ದಾಖಲೆ ಹೊಂದಿದ್ದಾರೆ. 1930 ರ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಬ್ರಾಡ್ಮನ್ ಈ ದಾಖಲೆ ಬರೆದಿದ್ದಾರೆ. ಈ ದಾಖಲೆ 89 ವರ್ಷಗಳಾದರೂ ಅವರ ಹೆಸರಿನಲ್ಲಿಯೇ ಇದೆ. ಇವರನ್ನು ಬಿಟ್ಟರೆ ಇಂಗ್ಲೆಂಡ್ನ ವ್ಯಾಲಿ ಹಮ್ಮಂಡ್ 905 ರನ್ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
4. ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್:
ವಿಶ್ವಕ್ರಿಕೆಟ್ನ ಪ್ರಸಿದ್ಧ ಟೆಸ್ಟ್ ಸರಣಿಯಾದ ಆ್ಯಶಸ್ ಟೆಸ್ಟ್ ಸರಣಿಗಳಲ್ಲಿ ಬ್ರಾಡ್ಮನ್ 89 ಸರಾಸರಿಯಲ್ಲಿ 37 ಪಂದ್ಯಗಳನ್ನಾಡಿದ್ದು 5028 ರನ್ಗಳಿಸಿದ್ದಾರೆ.
5. ವೇಗವಾಗಿ 2000 ದಿಂದ 6000 ರನ್: ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 2000 ದಿಂದ 6000 ಗಡಿದಾಟಿದ ದಾಖಲೆ ಇನ್ನು ಬ್ರಾಡ್ಮನ್ ಹೆಸರಿನಲ್ಲಿಯೇ ಇದೆ. ವೇಗವಾಗಿ 7000 ರನ್ ದಾಖಲೆಗೆ 4 ರನ್ ಅಗತ್ಯವಿದ್ದಾಗ ಬ್ರಾಡ್ಮನ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು.
6. ಅತಿ ಹೆಚ್ಚು ಬ್ಯಾಟಿಂಗ್ ಸರಾಸರಿ:
ವಿಶ್ವ ಟೆಸ್ಟ್ ಕ್ರಿಕೆಟ್ನಲ್ಲಿ ಇಂದಿಗೂ ಹೆಚ್ಚು ಮಾತನಾಡಿಕೊಳ್ಳುವ ವಿಶ್ವದಾಖಲೆಯೆಂದರೆ ಅದು ಬ್ರಾಡ್ಮನ್ ಬ್ಯಾಟಿಂಗ್ ಸರಾಸರಿ. ಅವರು 99.94 ರ ಸರಾಸರಿ ಕಾಯ್ದುಕೊಂಡಿದ್ದಾರೆ. ಇದು ಕ್ರಿಕೆಟ್ ಪಂಡಿತರ ಲೆಕ್ಕಾಚಾರದಂತೆ ಟೆಸ್ಟ್ ಕ್ರಿಕೆಟ್ ಇರುವವರೆಗೂ ಈ ದಾಖಲೆಯನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಇದು ಅಕ್ಷರಶಃ ಸತ್ಯ ಏಕೆಂದರೆ ಇವರನ್ನು ಬಿಟ್ಟರೆ ಎರಡನೇ ಸ್ಥಾನದಲ್ಲಿರುವ ಸ್ಟಿವ್ ಸ್ಮಿತ್ 63.24 ಸರಾಸರಿ ಹೊಂದಿದ್ದಾರೆ. ಇದನ್ನು ನೋಡಿದರೆ ಬ್ರಾಡ್ಮನ್ ದಾಖಲೆಗೆ ಮುರಿಯುವುದಿರಲಿ ಹತ್ತಿರ ಬರುವ ಬ್ಯಾಟ್ಸ್ಮನ್ ಇನ್ನು ಕ್ರಿಕೆಟ್ನಲ್ಲಿ ಕಾಣಸಿಗುವುದಿಲ್ಲ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ಡಾನ್ ಬ್ರಾಡ್ಮನ್ ಹೆಸರು ಇಂದಿಗೂ ಅಜರಾಮರವಾಗಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ, ಲಕ್ಷಾಂತರ ಕ್ರಿಕೆಟಿಗರಿಗೆ ಇವರು ಸ್ಫೂರ್ತಿಯಾಗಿದ್ದ ಬ್ರಾಡ್ಮನ್ ಫೆಬ್ರವರಿ 25 2001 ರಂದು ನಿಧನರಾಗಿದ್ದರು.