ಬೆಂಗಳೂರು: ಮಂಡಿರಜ್ಜು(ಹ್ಯಾಮ್‌ಸ್ಟ್ರಿಂಗ್) ಗಾಯಕ್ಕೆ ಒಳಗಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದರೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದಿರುವುದು ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂದು ತಿಳಿದಿದ್ದ ರೋಹಿತ್, ಇದೀಗ ಆಸೀಸ್ ಪ್ರವಾಸಕ್ಕೆ ಸಿದ್ಧರಾಗುತ್ತಿರುವುದಾಗಿ ಹೇಳಿದ್ದಾರೆ.
ಆಯ್ಕೆ ವೇಳೆ ಹ್ಯಾಮ್‌ಸ್ಟ್ರಿಂಗ್‌ಗೆ ಒಳಗಾಗಿದ್ದ ರೋಹಿತ್ರನ್ನು ಆಯ್ಕೆ ಸಮಿತಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಮಾನ್ಯ ಮಾಡಿರಲಿಲ್ಲ. ಆದರೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿತ್ತು. ಐಪಿಎಲ್ನ ಫೈನಲ್ ಸೇರಿದಂತೆ ಕೊನೆಯ ಪಂದ್ಯಗಳಲ್ಲಿ ಆಡುವ ಮೂಲಕ ರೋಹಿತ್ ಫಿಟ್ನೆಸ್ ತೋರಿಸಿದ್ದರು. ಆದರೆ ಬಿಸಿಸಿಐ ನಿಯಮದ ಪ್ರಕಾರ ಗಾಯದಿಂದ ಚೇತರಿಸಿಕೊಂಡ ಆಟಗಾರ ಎನ್ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯವಾಗಿ ಎದರುರಿಸಬೇಕಿದೆ. ಹೀಗಾಗಿ ರೋಹಿತ್ ಪ್ರಸ್ತುತ ರಾಹುಲ್ ದ್ರಾವಿಡ್ ನೇತೃತ್ವದ ಎನ್ಸಿಎನಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ.