ಚೆನ್ನೈ: 19 ವರ್ಷಗಳ ಹಿಂದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ದೋಷ ಕಂಡು ಹಿಡಿದು ಟಿಪ್ಸ್ ನೀಡಿದ್ದ ವೇಯ್ಟರ್ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಸಚಿನ್ ತಮ್ಮನ್ನು ಇನ್ನೂ ನೆನಪಿಟ್ಟುಕೊಂಡಿರುವುದಕ್ಕೆ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.
ಸಚಿನ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ,"19 ವರ್ಷಗಳ ಹಿಂದೆ ಚೆನ್ನೈನ ಕೋರಮಂಡಲ್ ಹೋಟೆಲ್ಗೆ ಕಾಫಿ ಕುಡಿಯಲು ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ವೇಯ್ಟರ್ ಒಬ್ಬ ನನ್ನ ಬ್ಯಾಟಿಂಗ್ ದೋಷದ ಕುರಿತು ನನಗೆ ಮಾಹಿತಿ ನೀಡಿದ್ದ. ನನ್ನ ಪ್ರತಿ ಪಂದ್ಯ ವೀಕ್ಷಿಸುವುದಾಗಿ ತಿಳಿಸಿದ. ಆತ ನಾನು ಧರಿಸುವ ಆರ್ಮ್ ಗಾರ್ಡ್ ಸರಿಯಿಲ್ಲ. ಇದರಿಂದ ನೀವು ಬ್ಯಾಟಿಂಗ್ ಮಾಡುವಾಗ ನಿಮ್ಮ ಬ್ಯಾಟ್ ಸ್ವಿಂಗ್ ಬದಲಾಗುತ್ತಿದೆ. ಇದರಿಂದ ನೀವೂ ಸಲೀಸಾಗಿ ಬ್ಯಾಟ್ ಬೀಸಲು ಸಾಧ್ಯವಾಗುತ್ತಿಲ್ಲ" ಎಂದಿದ್ದರು.
ಗುರುಪ್ರಸಾದ್ ಜೊತೆ ಈಟಿವಿ ಭಾರತ್ ಸಂದರ್ಶನ.. "ಆತನ ಮಾತು ಕೇಳಿದಾಗ ಆಶ್ಚರ್ಯವಾಯಿತು. ಆತನ ಮಾತಿನಂತೆ ನನ್ನ ಆರ್ಮ್ ಗಾರ್ಡ್‌ನ ಮರುವಿನ್ಯಾಸಗೊಳಿಸಿದೆ. ಇದಾದ ನಂತರ ನನ್ನ ಬ್ಯಾಟಿಂಗ್ನಲ್ಲಿ ವ್ಯತ್ಯಾಸಗಳು ಕಾಣಿಸಲಾರಂಭಿಸಿದವು. ನನ್ನ ಕ್ರಿಕೆಟ್ ಜೀವನದಲ್ಲಿ ನನ್ನ ತಪ್ಪನ್ನು ಗುರುತಿಸಿ, ಇಂತಹ ಮಹತ್ವದ ಸಲಹೆ ನೀಡಿದ ಏಕೈಕ ವ್ಯಕ್ತಿ ಆತ. ಒಮ್ಮೆ ಆತನನ್ನು ನಾನು ಕಾನಬೇಕೆಂದಿದ್ದೇನೆ. ಅವರನ್ನು ಹುಡುಕಲು ಸಹಾಯ ಮಾಡಿ" ಎಂದು ಸಚಿನ್ ಸಂದರ್ಶನದ ವಿಡಿಯೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ನೆಟ್ಟಿಗರನ್ನು ಕೇಳಿಕೊಂಡಿದ್ದರು.
ಟ್ವಿಟರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಚಿನ್ಗೆ ಸಹಾಯ ಮಾಡಿದ್ದ ವ್ಯಕ್ತಿ ಪತ್ತೆಯಾಗಿದ್ದಾರೆ. ತನ್ನನ್ನು ಇನ್ನೂ ಅವರು ನೆನೆಪಿಟ್ಟುಕೊಂಡಿರುವುದಕ್ಕೆ ಆತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಗುರುಪ್ರಸಾದ್ ಈಟಿವಿ ಭಾರತ ಜೊತೆ ಮಾತನಾಡಿದ್ದು, "ಸಚಿನ್ ನನ್ನನ್ನು 19 ವರ್ಷಗಳ ನಂತರ ನೆನೆಪಿಸಿಕೊಂಡು ಮಾತನಾಡಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ. ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿರುವ ವಿಚಾರ ತಿಳಿದು ನನ್ನ ಸಹೋದರಿಯರು ಹಾಗೂ ನನ್ನ ಸ್ನೇಹಿತರು ನನೆಗೆ ತಿಳಿಸಿದರು. ಹಾಗಾಗಿ ಸಚಿನ್ ದೊಡ್ಡತನ ಮೆಚ್ಚಲೇಬೇಕು ಅಂತಾ ಗುರುಪ್ರಸಾದ್ ಹೇಳಿಕೊಂಡಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಾಣಲು ಬಯಸುತ್ತಾರೆ. ಆದರೆ, ವಿಶ್ವಶ್ರೇಷ್ಠ ಕ್ರಿಕೆಟಿಗ ನನ್ನನ್ನು ನೋಡಲು ಬಯಸಿದ್ದಾರೆಂದರೆ ಅವರ ಅಭಿಮಾನಿಯಾದ ನನಗೆ ಇನ್ನೇನು ಬೇಕು. ನಾನು ಕೂಡ ಸಚಿನ್ರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಗುರುಪ್ರಸಾದ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.