ಅಬುಧಾಬಿ: ಐರ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಗುರ್ಬಾಜ್ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶಕತ ಸಿಡಿಸಿದ ಮೊದಲ ಅಫ್ಘಾನಿಸ್ತಾನ ಹಾಗೂ ವಿಶ್ವದ 16ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಇಂದು ಅಬುಧಾಬಿ ಶೇಕ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ 3 ಏಕದಿನ ಪಂದ್ಯಗಳ ಮೊದಲ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ 127 ರನ್ ಸಿಡಿಸಿದರು. ಅವರ ಈ ಇನ್ನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 9 ಸಿಕ್ಸರ್ ಒಳಗೊಂಡಿವೆ. ಇವರ ಶತಕ ಹಾಗೂ ರಶೀದ್ ಖಾನ್ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು. ರಶೀದ್ ಕೇವಲ 30 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 55 ರನ್ ಗಳಿಸಿದರು.
ಐರ್ಲೆಂಡ್ ಪರ ಆ್ಯಂಡಿ ಮೆಕ್ಬ್ರೈನ್ 5 ವಿಕೆಟ್ ಪಡೆದು ಮಿಂಚಿದರೆ, ಗ್ಯಾರೆತ್ ಡೆಲಾನಿ, ಸಿಮಿ ಸಿಂಗ್ ಹಾಗೂ ಮೆಕಾರ್ಟಿ ತಲಾ ಒಂದು ವಿಕೆಟ್ ಪಡೆದರು.