ಬ್ರಾಂಪ್ಟನ್: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಭಾರತದ ಯುವರಾಜ್ ಸಿಂಗ್ ತಮ್ಮ ನೈಜ ಆಟಕ್ಕೆ ಮರಳಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.
ಗ್ಲೋಬಲ್ ಟಿ-20 ಲೀಗ್ನಲ್ಲಿ ಟೊರೊಂಟೋ ನ್ಯಾಷನಲ್ ತಂಡದ ನಾಯಕನಾಗಿರುವ ಯುವಿ ಮೊದಲ ಪಂದ್ಯದಲ್ಲಿ 27 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿ ಕಳಪೆ ಪ್ರದರ್ಶನ ನೀಡಿದ್ದರು. ಆದರೆ ನಂತರದ ಎರಡು ಪಂದ್ಯಗಳಲ್ಲಿ ಮಿಂಚಿರುವ ಯುವಿ ತಮ್ಮ ಸ್ಫೋಟಕ ಆಟಕ್ಕೆ ಮರಳಿದ್ದಾರೆ.
ಸೋಮವಾರ ನಡೆದ ಪಂದ್ಯದಲ್ಲಿ ವಿನ್ನಿಪೆಗ್ ಹಾಕ್ಸ್ ತಂಡದ ವಿರುದ್ಧ 26 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 45 ರನ್ ಗಳಿಸಿ ಮಿಂಚಿದ್ದಾರೆ. ಇದರ ಹಿಂದಿನ ಪಂದ್ಯದಲ್ಲೂ ಯುವಿ 21 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 35 ರನ್ ಗಳಿಸಿದ್ದರು.
ಒಟ್ಟಾರೆ ಯುವಿ ನೇತೃತ್ವದಲ್ಲಿ ಟೊರೊಂಟೋ ನ್ಯಾಷನಲ್ಸ್ 3 ಪಂದ್ಯಗಳನ್ನಾಡಿದ್ದು, 2 ಸೋಲು ಹಾಗೂ ಒಂದು ಗೆಲುವು ಕಂಡಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ವಿನ್ನಿಪೆಗ್ ಹಾಕ್ಸ್ ವಿರುದ್ಧ 216 ರನ್ ಗಳಿಸಿಯೂ ಯುವರಾಜ್ ತಂಡ 3 ವಿಕೆಟ್ಗಳ ಸೋಲನುಭಿವಿಸಿತು.
217 ರನ್ಗಳ ಬೃಹತ್ ಗುರಿಯನ್ನು ಹಾಕ್ಸ್ ತಂಡ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದು 3 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಕ್ರಿಸ್ ಲಿನ್ 89 ರನ್, ಶೈಮನ್ ಅನ್ವರ್ 43 ಹಾಗೂ ಪಂಜಾಬ್ನ ಸನ್ನಿ ಸೊಹಾಲ್ 56 ರನ್ ಗಳಿಸಿ ಹಾಕ್ಸ್ ತಂಡದ ಜಯಕ್ಕೆ ಕಾರಣರಾದರು.