ಬ್ರಿಸ್ಬೇನ್:ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ್ದ 134 ರನ್ಗಳ ದಾಖಲೆ ಜಯಕ್ಕೆ ಕಾರಣರಾಗಿದ್ದ ಆಸೀಸ್ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಕ್ರಿಕೆಟ್ನಿಂದ ತಾತ್ಕಾಲಿಕ ರಜೆ ತೆಗೆದುಕೊಂಡಿದ್ದಾರೆ.
ಮಾನಸಿಕ ಆರೋಗ್ಯದ ತೊಂದರೆಯಿಂದ ಬಳಲುತ್ತಿರುವ ಮ್ಯಾಕ್ಸ್ವೆಲ್ ತವರಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ-20 ಸರಣಿಯಿಂದಲೇ ಕ್ರಿಕೆಟ್ನಿಂದ ಸ್ವಲ್ಪದಿನಗಳ ಕಾಲ ಹೊರಗುಳಿಯಲು ನಿರ್ಧರಿಸಿದ್ದಾರೆ. ಇದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಬೆಂಬಲ ಸೂಚಿಸಿದೆ.
ಮ್ಯಾಕ್ಸ್ವೆಲ್ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಧಾನ ವ್ಯವಸ್ಥಾಪಕ ಬೆನ್ ಒಲಿವರ್, ಮ್ಯಾಕ್ಸ್ವೆಲ್ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ತಂಡದ ಆಟಗಾರರು ಮತ್ತು ಸಿಬ್ಬಂದಿ ಯೋಗಕ್ಷೇಮವೆ ನಮಗೆ ಪ್ರಮುಖವಾಗಿದೆ. ಗ್ಲೇನ್ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.
ಮ್ಯಾಕ್ಸ್ವೆಲ್ ನಮ್ಮ ತಂಡದ ವಿಶೇಷ ಆಟಗಾರ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಕುಟುಂಬದ ಅವಿಭಾಜ್ಯ ಅಂಗ. ಅವರು ಬೇಸಿಗೆಯ ವೇಳೆಗೆ ತಂಡಕ್ಕೆ ಮರಳಲಿದ್ದಾರೆ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ಮ್ಯಾಕ್ಸ್ವೆಲ್ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 62 ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.