ಕೊಲೊಂಬೊ: ಅಫ್ಘಾನಿಸ್ತಾನದ ಯುವ ವೇಗಿ ನವೀನ್ ಉಲ್ ಹಕ್ ಎಲ್ಪಿಎಲ್ ವೇಳೆ ಮೈದಾನದಲ್ಲಿ ಮೊಹಮ್ಮದ್ ಅಮೀರ್ ಜೊತೆ ಮಾತಿನ ಸಮರದಲ್ಲಿ ಪಾಲ್ಗೊಂಡಿದ್ದಕ್ಕೆ ಕುಪಿತಗೊಂಡಿರುವ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಫ್ರಿದಿ, ಆಟವನ್ನಾಡಿ ಮತ್ತು ನಿಂದನಾತ್ಮಕ ವಾಕ್ಮಸಮರ ಬೇಡ' ಎಂದು ಬುದ್ದಿ ಮಾತು ಹೇಳಿದ್ದರು.
ಈ ಮಾತಿಗೆ ನಯವಾಗಿ ತಿರುಗೇಟು ನೀಡಿರುವ ನವೀನ್ ಉಲ್ ಹಕ್, ಗೌರವ ಕೊಡುವುದಕ್ಕೆ ನಾವು ಸಿದ್ದ, ಆದರೆ ನನ್ನ ಮತ್ತು ನಮ್ಮ ಜನರ ಬಗ್ಗೆ ಅವಹೇಳನ ಮಾಡಿದರೆ ಸುಮ್ಮನಿರುವುದಕ್ಕಾಗುವುದಿಲ್ಲ" ಎಂದು ತಿರುಗೇಟು ನೀಡಿದ್ದಾರೆ.
ಮಂಗಳವಾರ ನಡೆದ ಪಂದ್ಯದ ವೇಳೆ ಕ್ಯಾಂಡಿ ತಂಡ ಜಯಿಸಿತ್ತು. ಈ ವೇಳೆ, ಕೊನೆಯ ಓವರ್ ಎಸೆದಿದ್ದ ನವೀನ್ ಮೊದಲ ಎಸೆತದಲ್ಲಿ ಅಮೀರ್ ಸಿಕ್ಸರ್ ಸಿಡಿಸಿದ್ದರು, ನಂತರ 2ನೇ ಎಸೆತದಲ್ಲಿ ಬೀಟ್ ಮಾಡಿದಾಗ ಇಬ್ಬರ ನಡುವೆ ಮಾತಿನ ಸಮರ ನಡೆದಿತ್ತು. ನಂತರ ಪಂದ್ಯ ಮುಗಿದ ಮೇಲೆ ಅಫ್ರಿದಿ ನವೀನ್ ಉಲ್ ಹಕ್ಗೆ ಹಿರಿಯ ಆಟಗಾರರಿಗೆ ಗೌರವ ಕೊಡು ಎಂದು ಹೇಳಿದ್ದರು. ಇದೇ ಮಾತನ್ನು ಟ್ವೀಟ್ನಲ್ಲೂ ಕೂಡಾ ನೆನಪಿಸಿದ್ದರು.
"ಯುವ ಆಟಗಾರನಿಗೆ ನನ್ನ ಸಲಹೆ ಸರಳವಾಗಿತ್ತು. ಆಟವಾಡಿ, ಆದರೆ ನಿಂದನೀಯ ಮಾತಿನ ಸಮರದಲ್ಲಿ ಪಾಲ್ಗೊಳ್ಳಬೇಡಿ. ನನಗೆ ಅಫ್ಘಾನಿಸ್ತಾನ ತಂಡದಲ್ಲಿ ಸ್ನೇಹಿತರಿದ್ದಾರೆ. ನಮ್ಮ ಅವರ ನಡುವೆ ಬಹಳ ಸೌಹಾರ್ದಯುತ ಸಂಬಂಧವಿದೆ. ತಂಡದ ಆಟಗಾರರಿಗೆ ಮತ್ತು ಎದುರಾಳಿಗಳಿಗೆ ಗೌರವ ಕೊಡುವುದು ಆಟದ ಮೂಲ ಮನೋಭಾವ" ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ 21 ವರ್ಷದ ನವೀನ್ ಉಲ್ ಹಕ್," ಸಲಹೆ ಪಡೆದುಕೊಳ್ಳಲು ಮತ್ತು ಗೌರವ ಕೊಡಲು ಯಾವಾಗಲೂ ಸಿದ್ದ. ಕ್ರಿಕೆಟ್ ಜಂಟಲ್ ಮ್ಯಾನ್ ಗೇಮ್, ಆದರೆ ಯಾರಾದರೂ ನೀವು ನಮ್ಮ ಕಾಲು ಕೆಳಗಿದ್ದೀರಾ, ಅಲ್ಲೆ ಇರುತ್ತೀರಾ ಎಂದು ಹೇಳಿದಾಗ, ಅವರು(ಅಮೀರ್) ನನ್ನ ಬಗ್ಗೆ ಮಾತನಾಡುವುದಲ್ಲದೇ ನಮ್ಮ(ಅಫ್ಘಾನಿಸ್ತಾನ) ಜನರ ಬಗ್ಗೆ ಅವಹೇಳನವಾಗಿ ಮಾತಾಡಿದ್ದಾರೆ " ಎಂದು ಎಂಬುದನ್ನು ನೆನಪಿಸುವುದರ ಮೂಲಕ ತಿರುಗೇಟು ನೀಡಿದ್ದಾರೆ.