ಕ್ರೈಸ್ಟ್‌ಚರ್ಚ್(ನ್ಯೂಜಿಲ್ಯಾಂಡ್): ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಪ್ರವಾಸಿ ಭಾರತ 'ಎ' ತಂಡವು, ಆತಿಥೇಯ ತಂಡದ ವಿರುದ್ಧ ಉತ್ತಮ ಆಟವಾಡಿದ್ದಾರೆ. ಶುಬ್ಮನ್ ಗಿಲ್ ಆಕರ್ಷಕ ದ್ವಿಶತಕ ಸಿಡಿಸಿ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡಿದ್ದಾರೆ.
ಭಾರತ- ನ್ಯೂಜಿಲ್ಯಾಂಡ್ ನಡುವಿನ 4 ದಿನಗಳ ಅನಧಿಕೃತ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಶುಕ್ರವಾರ, ಶುಬ್ಮನ್ ಗಿಲ್ ಆಕರ್ಷಕ ದ್ವಿಶತಕ ಸಿಡಿಸಿದರು. ಅಜೇಯ 204ರನ್ ಸಿಡಿಸಿ ಮುಂಬರುವ ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿಗೆ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದರು.
ಒಟ್ಟು 279 ಎಸೆತಗಳನ್ನೆದುರಿಸಿದ ಗಿಲ್, 4 ಸಿಕ್ಸರ್ ಹಾಗೂ 22 ಬೌಂಡರಿ ನೆರವಿನಿಂದ 204 ರನ್ ಸಿಡಿಸಿದರು. ಇದು ಶುಬ್ಮನ್ ಗಿಲ್ ಸಿಡಿಸಿದ ಎರಡನೇ ದ್ವಿಶತಕವಾಗಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಕಳೆದ ವರ್ಷ ದ್ವಿಶತಕ ಸಿಡಿಸಿದ್ದರು.
ನ್ಯೂಜಿಲ್ಯಾಂಡ್ ತಂಡ 562 ರನ್ ಗಳಿಸಿ ಡಿಕ್ಲೇರ್ ಮಾಡಿದರೆ, ಭಾರತ 216 ಮತ್ತು 448 ರನ್ ಗಳಿಸಲಷ್ಟೇ ಶಕ್ತವಾಯ್ತು. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು.
ಇದೆ ಫೆಬ್ರವರಿ 21ರಿಂದ ಭಾರತ- ನ್ಯೂಜಿಲ್ಯಾಂಡ್ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದ್ದು, ಇದಕ್ಕಾಗಿ ಭಾರತ ತಂಡ ಇನ್ನಷ್ಟೇ ಪ್ರಕಟವಾಗಬೇಕಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿ ಗಿಲ್ ಇದ್ದಾರೆ.