ನವದೆಹಲಿ:ವಿರಾಟ್ ಕೊಹ್ಲಿ ವೈಫಲ್ಯಕ್ಕೆ ಅವರ ಪತ್ನಿ ಅನುಷ್ಕಾ ಶರ್ಮಾ ಅವರನ್ನು ದೂರಿಲ್ಲ ಮತ್ತು ಅನುಷ್ಕಾ ಬಗ್ಗೆ ನಾನು ಅಸಭ್ಯವಾಗಿ ಮಾತನಾಡಿಲ್ಲ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸ್ಪಷ್ಟನೆ ನೀಡಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಈ ವೇಳೆ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಅವರ ಪತ್ನಿ ಅನುಷ್ಕಾಳನ್ನು ಎಳೆದು ತಂದಿದ್ದರು. ‘ಲಾಕ್‌ಡೌನ್‌ನಲ್ಲಿ ವಿರಾಟ್ ಕೇವಲ ಅನುಷ್ಕಾ ಅವರ ಬೌಲಿಂಗ್ ಎದುರಿಸಿದ್ದಾರೆ. ಆ ವಿಡಿಯೋ ನೋಡಿದ್ದೀರಾ, ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ’ ಎಂದು ಗವಾಸ್ಕರ್ ಲೈವ್ ಕಾಮೆಂಟರಿಯಲ್ಲಿ ಹೇಳಿದ್ದರು.
ಗವಾಸ್ಕರ್ ಅವರ ಈ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಗವಾಸ್ಕರ್ ಹೇಳಿಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಗವಾಸ್ಕರ್ ವಿವಾದಿತ ಹೇಳಿಕೆ: ತಿರುಗೇಟು ನೀಡಿದ ಅನುಷ್ಕಾ ಶರ್ಮಾ!
ಲಾಕ್‌ಡೌನ್ ದಿನಗಳಲ್ಲಿ ತಮ್ಮ ನಿವಾಸದ ಬಾಲ್ಕನಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಕ್ರಿಕೆಟ್ ಆಡುತ್ತಿದ್ದ ವಿಡಿಯೋವನ್ನು ಎದುರು ಮನೆಯವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಗವಾಸ್ಕರ್, ಈ ಬಗ್ಗೆ ಮಾತನಾಡಿ ಕೊಹ್ಲಿ ಕಾಲೆಳೆದಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗವಾಸ್ಕರ್, ಲಾಕ್‍ಡೌನ್ ಸಮಯದಲ್ಲೂ ಕೂಡ ವಿರಾಟ್ ಅಭ್ಯಾಸ ಮಾಡಿರಲಿಲ್ಲ. ಅವರು ಅವರ ಪತ್ನಿ ಅನುಷ್ಕಾ ಜೊತೆ ಟಿನ್ನಿಸ್ ಬಾಲ್ನಲ್ಲಿ ಅವರ ಅಪಾರ್ಟ್‍ಮೆಂಟ್ ಒಳಗೆ ಅಭ್ಯಾಸ ಮಾಡುತ್ತಿದ್ದರು ಎಂದಿದ್ದೇನೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅನುಷ್ಕಾ ಜೊತೆ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ. ಅನುಷ್ಕಾ ಬೌಲಿಂಗ್‍ಗೆ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳುವುದು ತಪ್ಪಾ? ಇದರಲ್ಲಿ ಯಾವ ಪದ ಅಸಭ್ಯವಾಗಿದೆ. ಇದರಲ್ಲಿ ನಾನು ಯಾವುದನ್ನು ಸೆಕ್ಸಿಯಾಗಿ ಹೇಳಿದ್ದೇನೆ. ಕೇವಲ ನಾನು ವೈರಲ್ ಆದ ವಿಡಿಯೋವನ್ನು ಮನದಲ್ಲಿಟ್ಟುಕೊಂಡು ಮಾತನಾಡಿದ್ದೇನೆ ಎಂದಿದ್ದಾರೆ.
‘ತಂಡದ ಯಾವುದೇ ಪ್ರವಾಸ ಇರಲಿ ಪತ್ನಿಯರೂ ಕೂಡ ಅವರ ಜೊತೆಗೆ ಹೋಗಬೇಕು ಎಂದು ವಾದಿಸುತ್ತಾ ಬಂದಿರುವವನು ನಾನು. ಸಾಮಾನ್ಯವಾಗಿ 9ರಿಂದ 5 ಗಂಟೆಯವರೆಗೆ ಕೆಲಸ ಮಾಡುವ ವ್ಯಕ್ತಿ, ಕೆಲಸ ಮುಗಿಸಿದ ಬಳಿಕ ಪತ್ನಿಯರ ಮಡಿಲಿಗೆ ಹೋಗುತ್ತಾನೆ. ಕ್ರಿಕೆಟಿಗರಿಗೆ ಈ ಅವಕಾಶ ಏಕೆ ನೀಡಬಾರದು? ಅಂದಹಾಗೆ ನನ್ನ ಹೇಳಿಕೆಯನ್ನು ಯಾರೋ ಅಸಭ್ಯವಾಗಿ ತಿರುಚಿದರೆ ಅದಕ್ಕೆ ನಾನು ಹೊಣೆಗಾರನಲ್ಲ’ ಎಂದಿದ್ದಾರೆ.